ಹಾಸನ: ಜಿಲ್ಲೆಯಲ್ಲಿ ಒಂದೇ ದಿನ ಹಲವು ಕಾಮಗಾರಿ, ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಾರ್ಚ್ ೧೩ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.
ನಗರದ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು ಆವರಣದಲ್ಲಿ ಮಾ. ೧೩ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಫಲಾನುಭವಿಗಳ ಸಮ್ಮೇಳನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾ ಟನೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ನೆರವೇರಿಸಲಿದ್ದಾರೆ.
ಸಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಹೆಚ್, ಡಿ, ಕುಮಾರಸ್ವಾಮಿ ಅವರು ಹಾಸನದಲ್ಲಿ ಒಂದೇ ದಿನ ೩೦ಕ್ಕೂ ಹೆಚ್ಚು ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಇದಾದ ಬಳಿಕ ಮಾರ್ಚ್ ೧೩ರಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ೧೫ಕ್ಕೂ ಹೆಚ್ಚು ಕಟ್ಟಡ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುತ್ತಿದ್ದಾರೆ. ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ, ಗೌಡ ಅವರ ಅಧಿಕಾರ ಅವಧಿಯಲ್ಲಿ ಇದೊಂದು ಬೃಹತ್ ಕಾರ್ಯಕ್ರಮವಾಗಿದ್ದು ಮುಂದಿನ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಹಿಮ್ಸ್ ಆವರಣದಲ್ಲಿ ೪೫೦ ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಕಟ್ಟಡ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಟ್ಟಡ, ವಸತಿ ನಿಲಯ ಕಟ್ಟಡ, ಎಂಬಿಬಿಎಸ್ ಪುರುಷ – ಮತ್ತು ಮಹಿಳಾ ವಿರ್ದ್ಯಾಥಿಗಳ ವಸತಿ ನಿಲಯ ಕಟ್ಟಡಗಳು, ಶ್ರೀ ಜಯಚಾಮರಾಜೇಂದ್ರ ಹಳೆ ಆಸ್ಪತ್ರೆ ಮೇಲೆ ೩೦೦ ಹಾಸಿಗೆಗಳ ಆಸ್ಪತ್ರೆ ಕಟ್ಟಡ, ಸಿಟಿ ಸ್ಕ್ಯಾನ್ ಉಪಕರಣ, ಕ್ಯಾನ್ಸರ್ ಕೇರ್ ಘಟಕದ ಉನ್ನತೀಕರಣ, ಪರೀಕ್ಷಾ ಹಾಲ್, ಗ್ಯಾಲರಿ ಟೈಪ್ ಲೆಕ್ಚರ್ ಹಾಲ್, ಐಸಿಯು ಮೇಲ್ದರ್ಜೀಕರಣ, ಮಲ್ಟಿ ಡಿಸಿಪ್ಲಿನರಿ ರಿಸರ್ಚ್ ಯುನಿಟ್ (ಎಂ.ಆರ್.ಯು ಲ್ಯಾಬ್) ಡ್ಯೂಮನ್ ಮಿಲ್ಕ್ ಬ್ಯಾಂಕ್, ಡಯಾಲಿಸಿಸ್ ಘಟಕದ ಮೇಲ್ದರ್ಜೀಕರಣ, ಸ್ನಾತಕೋತ್ತರ ಬಾಲಕರ-ಬಾಲಕಿಯರ ಹಾಸ್ಟೆಲ್ ಕಟ್ಟಡ (ಶಿಲಾನ್ಯಾಸ) ವೈದ್ಯರ ವಸತಿ ಗೃಹಗಳ ಕಟ್ಟಡ ಶಿಲಾನ್ಯಾಸ, ಲೈಬ್ರರಿ ಮತ್ತು ಸ್ಕಿಲ್ ಲ್ಯಾಬ್ ಕಟ್ಟಡ ಶಿಲಾನ್ಯಾಸ ನಡೆಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಶ್ರೀಮತಿ ಇಂದಿರಾ ಗಾಂದಿ ನರ್ಸಿಂಗ್ ಬಾಲಕಿಯ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಲಿದೆ.
ಪುರಾತತ್ವ, ಸ೦ಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರ್ಕಾರಿ ವಸ್ತು ಸಂಗ್ರಹಾಲಯದ ನೂತನ ಕಟ್ಟಡ ಉದ್ಘಾಟನೆ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ.ಸುಧಾಕರ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಕೆ. ಸಿ. ನಾರಾಯಣಗೌಡ ಅವರು ಮುಖ್ಯ ಉಪಸ್ಥಿತಿ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪ್ರೀತಮ್ ಜೆ. ಗೌಡ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಹೆಚ್.ಡಿ. ರೇವಣ್ಣ, ಹೆಚ್. ಕೆ. ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ, ಸಿ.ಎನ್. ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು ಜಿ. ಮಾದೇಗೌಡ, ಸೂರಜ್ ರೇವಣ್ಣ, ನಗರ ಸಭೆ ಅಧ್ಯಕ್ಷ ಆರ್. ಮೋಹನ್ ಮತ್ತಿತರರು ಭಾಗವಹಿಸಲಿದ್ದಾರೆ.