ಆಲೂರು: ಅಧಿಕಾರಿಗಳು ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಗಾರಿಕೆ ನಡೆಸಲು ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕು. ಗಣಿಗಾರಿಕೆ ನಿಲ್ಲಿಸದಿದ್ದರೆ ಚುನಾವಣೆಯನ್ನು ಬಹಿಷ್ಕಾರಿಸುವುದರ ಜೊತೆಗೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಹಳೇ ಹೊಂಕರವಳ್ಳಿ ಗ್ರಾಮಸ್ಥರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಗ್ರಾಮಸ್ಥ ಪ್ರಕಾಶ್ ಮಾತನಾಡಿ, ತಾಲೂಕಿನ ಮಲ್ಲಾಪುರ ಗ್ರಾ.ಪಂ ಗೆ ಸೇರಿರುವ ಹೊಂಕರವಳ್ಳಿ ಗಡಿ ಭಾಗದ ಸರ್ವೇ ನಂ. ೫೭ರ ಪಕ್ಕ, ಸಕಲೇಶಪುರ ತಾಲೂಕು ಬೆಳಗೋಡು ಹೋಬಳಿ ಹೊಸಗದ್ದೆ ಗ್ರಾಮದ ಸರ್ವೇ ನಂ. ೧೪೯ರಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆ ನಡೆಸಲು ಪ್ರಭಾವಿ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದು, ಅಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಸಹಾಯದಿಂದ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಈ ವಿಷಯವಾಗಿ ತಹಶೀಲ್ದಾರ, ಲೋಕಾಯುಕ್ತ ಹಾಗೂ ಗಣಿಗಾರಿಕೆಯವರಿಗೆ ದೂರು ನೀಡಿದರೂ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ಜಿಲ್ಲಾ ಹಾಗೂ ತಾಲೂಕು ಕಚೇರಿಗಳಲ್ಲಿ ದಾಖಲಾತಿ ಕೊಟ್ಟರು ಯಾವ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಮೂರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದು ದಿನನಿತ್ಯ ಗ್ರಾಮಸ್ಥರು ಮನೆಯಿಂದ ಸಕಲೇಶಪುರ, ಆಲೂರು ತಾಲೂಕು ಕಚೇರಿಗೆ ಅಲೆದಾಡಿ ಸಾಕಾಗಿದೆ, ತಾಲೂಕು ಮಟ್ಟದ ಅಧಿಕಾರಿಗಳಿಂದ ಹಿಡಿದು ಪಂಚಾಯಿತಿ ಅಧಿಕಾರಿಗಳೆಲ್ಲಾ ಶಾಮಿಲಾಗಿದ್ದು ಹಣದ ಆಸೆಗೆ ಕುಳಿತಲ್ಲೇ ಅಧಿಕಾರಿಗಳು ಹಾಗೂ ಗಣಿ ಇಲಾಖೆಯವರು ಸ್ಥಳ ಪರಿಶೀಲನೆ ಮಾಡದೆ ಅಕ್ರಮ ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ಮಾಡಿಕೊಟ್ಟಿದ್ದಾರೆ. ಹಣದ ಆಮಿಷಕ್ಕೆ ಒಳಗಾಗಿರುವ ಅಧಿಕಾರಿಗಳು, ಬಡವರ ಜೀವನ ಹಾಗೂ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಇನ್ನೂ ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಜೀವ, ಜೀವನ ನಡೆಸಲು ಕಷ್ಟಕರವಾಗಿದೆ, ಹಾಗೂ ಹಲವು ಪ್ರಾಣಿಗಳಿಂದ ಬೆಳೆದಿರುವ ಬೆಳೆಯು ಕೂಡ ಹಾನಿಯಾಗುತ್ತಿದ್ದು ತಿನ್ನುವ ಅನ್ನಕ್ಕೂ ನೆಮ್ಮದಿ ಇಲ್ಲದಂತಾಗಿದೆ. ಈಗ ಈ ಗಣಿಗಾರಿಕೆಯಿಂದ ಇನ್ನೂ ಹೆಚ್ಚಿನ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಹಾಗಾಗಿ ಇವೆಲ್ಲವನ್ನೂ ಅಧಿಕಾರಿಗಳು ಮನಗೊಂಡು ನಮಗೆ ಜೀವನ ನಡೆಸಲು ಸಹಕಾರ ಮಾಡಿ ಕೊಡಬೇಕು ಮತ್ತು ಅಕ್ರಮ ಗಣಿಗಾರಿಕೆ ಮಾಡುವವರಿಗೆ ಸಹಾಯ ಮಾಡದೆ ಜನ ಸಾಮಾನ್ಯರ ಹಿತದೃಷ್ಟಿಯನ್ನು ಅರಿಯಬೇಕು. ಗ್ರಾಮಸ್ಥರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸದೆ ನಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಅಕ್ರಮ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಯೊಗೇಶ್, ರಾಕೇಶ, ಚಂದ್ರು ಕುಮಾರ, ಪ್ರಕಾಶ, ಅಣ್ಣಪ್ಪ ಗುರುಪ್ರಸಾದ, ಯೋಗೇಶ, ನಾಗೇಶ ಇದ್ದರು.