ಅರಕಲಗೂಡು: ಜಾನಪದ ಪಠ್ಯವಾಗಬೇಕಿರುವ ಜತೆಗೆ ಸರ್ಕಾರ ಜಾನಪದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಜನಪದದ ಉಳಿವಿಗೆ ಒತ್ತು ನೀಡಬೇಕು ಎಂದು ಜಾನಪದ ಕಲಾವಿದ ಡಾ. ಅಪ್ಪಗೆರೆ ತಿಮ್ಮರಾಜು ಒತ್ತಾಯಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರೆಡನೇ ದಿನವಾದ ಮಂಗಳವಾರ ಜಾನಪದ ಗಾಯನ ಮತ್ತು ವಿಶ್ಲೇಷಣೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾನಪದ ಉಳಿಯಬೇಕಾದರೆ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಜಾನಪದಕ್ಕೆ ಸಂಬಂಧಿಸಿದ ಅಂಶಗಳು ಅಡಕ ಮಾಡುವ ಮೂಲಕ ಮಕ್ಕಳಿಗೆ ಬಾಲ್ಯದಲಿಯೇ ನೈತಿಕತೆಯ ಪಾಠ ಕಲಿಸಬೇಕು. ಆಗ ಮಾತ್ರ ಜಾನಪದ ಅಭ್ಯುದಯ ಸಾಧ್ಯ. ಇಂತಹ ಬೆಳವಣಿಗೆಗೆ ಜಾನಪದ ಅಭಿವೃದ್ಧಿ ಪ್ರಾಧಿಕಾರದ ಅಗತ್ಯವಿದೆ ಎಂದರು.
ಜಾನಪದದ ಬಗೆಗೆ ನಾವು ಅರಿವು ಬೆಳೆಸಿಕೊಳ್ಳದಿದ್ದರೆ ಪ್ರಬುದ್ಧವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಒಂದೊಂದು ಗೀತೆಯು ನಮ್ಮ ಬದುಕಿಗೆ ಸಮೀಪದಲ್ಲಿದೆ ಅದನ್ನು ನಾವು ಅರ್ಥೈಸಿಕೊಳ್ಳಲು ವಿಫಲವಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಗಾಯಕಿ ವಾಣಿ ನಾಗೇಂದ್ರ ಪ್ರಸ್ತುತಪಡಿಸಿದ ಸೋಜುಗಾದ ಸೂಜಿ ಮಲ್ಲಿಗೆ ಗೀತೆಗೆ ನಿವೃತ್ತ ಪ್ರಾಂಶುಪಾಲ ಟಿ.ಎಸ್. ಅಪ್ಪಾಜಿಗೌಡ ವಿಶ್ಲೇಷಿಸಿ, ಜಾನಪದರು ಮತ್ತು ದೇವರ ಕಲ್ಪನೆ ಈ ಹಾಡಿನಲ್ಲಿದ್ದು, ಜಾನಪದರು ಎಲ್ಲದರಲ್ಲೂ ದೇವರನ್ನು ಕಾಣುತ್ತಾರೆ. ಅವರ ದೃಷ್ಟಿಯಲ್ಲಿ ಎಲ್ಲವೂ ದೈವಮಯ ಭಾವನೆಯಿಂದ ಗುರುತಿಸಿಕೊಳ್ಳುತ್ತಾರೆ. ಅಂತೆಯೇ ಮಾದಪ್ಪನ ಹಾಡಿನಲ್ಲಿಯೂ ತಾನು ನಂಬಿರುವ ದೇವರನ್ನು ಪೂಜಿಸಲು ತಯಾರಿ, ಹೊಗಳಿಕೆ, ಭಾವಬುತ್ತಿ ತುಂಬಿದೆ. ಜಾನಪದರಿಗೆ ಸಣ್ಣ ಸಣ್ಣ ವಿಷಯಗಳೂ ವಿಶಿಷ್ಠವೆನಿಸುತ್ತದೆ. ಜುಂಜಯ್ಯ, ಮಂಟೆಸ್ವಾಮಿ, ಸಿದ್ದಪ್ಪಾಜಿ, ಮಲೆ ಮಹದೇಶ್ವರ ಸ್ವಾಮಿಯ ಬಗ್ಗೆ ಸೃಷ್ಟಿಯಾಗಿರುವ ಹಲವು ಹಾಡುಗಳು ನಮ್ಮ ನಡುವೆ ಸಿಗುತ್ತದೆ ಎಂದರು.
ಗಾಯಕ ಕುಮಾರ್ ಕಟ್ಟೆ ಬೆಳಗುಲಿ ಪ್ರಸ್ತುತಪಡಿಸಿದ ನೀಲಯ್ಯ-ಶರಣೆ ಸಂಕಮ್ಮ ಹಾಡಿನ ಕುರಿತು ಪ್ರಾಧ್ಯಾಪಕ ಡಾ. ಡಿ.ಕೆ.ಮಂಜಯ್ಯ ವಿಶ್ಲೇಷಣೆ ಮಾಡಿ, ಮಕ್ಕಳಾಗಿಲ್ಲದ ನೀಲಯ್ಯ-ಸಂಕವ್ವ ನೆರೆಯವರ ಕೊಂಕು ಸಹಿಸದೇ ಒಂಟಿದೊಡ್ಡಿ ಎಂಬಲ್ಲಿ ಪ್ರತ್ಯೇಕವಾಗಿ ವಾಸವಿರುತ್ತಾರೆ. ಒಂದೊಮ್ಮೆ ಊರಿನ ಗಂಡಸರೆಲ್ಲರೂ ಹೆಜ್ಜೇನು ಬೇಟೆಗೆ ಹೊರಟಿದ್ದಾಗ ನೀಲಯ್ಯನೂ ಹೊರಡಬೇಕಿರುತ್ತದೆ. ಆ ಸಂದರ್ಭ ಅತೀ ಸುಂದರಿಯಾದ ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ಹೋಗಲು ಅನುಮಾನಿಸುತ್ತಾನೆ. ಆದರೆ ಆಕೆ ತನ್ನ ಮೇಲಿನ ಅಚಲ ವಿಶ್ವಾಸದಿಂದ ಗಂಡ ಕೇಳಿದ ಭಾಷೆ ಕೊಡಲು ನಿರಾಕರಿಸುತ್ತಾಳೆ. ಹೆಣ್ಣಿನ ಪಾವಿತ್ರ್ಯತೆ, ಆತ್ಮಬಲ, ಸಾತ್ವಿಕ ಗುಣ ಈ ಹಾಡಿನಲ್ಲಿ ಮೇಳೈಸಿದೆ. ಗಂಡನ ಅನುಮಾನ, ಹೆಣ್ಣು ಅನುಭವಿಸುವ ಶೋಷಣೆ, ಹಿಂಸೆಯ ಅನಾವರಣವೂ ಆಗಿದೆ. ಸಮಕಾಲೀನ ಸಮಾಜದ ಮಹಿಳಾ ಹೋರಾಟದ ನಾಯಕಿಯಾಗಿ ಈ ಹಾಡಿನಲ್ಲಿ ಸಂಕವ್ವ ಕಾಣುತ್ತಾಳೆ ಎಂದು ಹೇಳಿದರು.
ದೇವಾನಂದ ವರಪ್ರಸಾದ್ ಹಾಡಿದ ಮಂಟೆಸ್ವಾಮಿ ಕುರಿತ ಗೀತೆಯ ಬಗೆಗೆ ವಿಶ್ಲೇಷಣೆ ನೀಡಿದ ಡಾ.ಎನ್.ಸಿ ರವಿ, ಮಂಟೆಸ್ವಾಮಿ ಪ್ರಸಂಗವು ತಾಯಿಯೊಬ್ಬಳು ಆಕಳು ಹಾಲು ಕರೆಯುವ ಸಂದರ್ಭದಲ್ಲಿ ಸನ್ಯಾಸಿಯೊಬ್ಬರು ಭಿಕ್ಷೆ ಕೇಳಿಕೊಂಡು ಬಂದ ಸನ್ಯಾಸಿಯನ್ನು ನಿಂದಿಸಿ ಕಡೆಗೆ ಆತ ನಿಂದಿಸಿದವಳನ್ನೆ ತಾಯಿಯನ್ನಾಗಿ ಒಪ್ಪಿಕೊಂಡ ಪ್ರಸಂಗವನ್ನು ನಿರೂಪಿಸುತ್ತದೆ. ಜಾನಪದ ಕಾವ್ಯಗಳು ನಮಗೆ ಬದುಕಿನ ದಾರಿ ತೋರಿಸುತ್ತವೆ. ಆ ಮೌಲ್ಯವನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಗುಣ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಮಂಟೆಸ್ವಾಮಿ ಕಾವ್ಯವು ಕೂಡ ಬದುಕಿನಲ್ಲಿ ನಾವು ಇಡಬೇಕಾದ ಹೆಜ್ಜೆಗಳ ಬಗೆಗೆ ಸಾಕಷ್ಟು ಅರಿವು ಮೂಡಿಸುತ್ತದೆ ಎಂದರು.
ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ, ವಿಜ್ಞಾನದ ಪರಿಕಲ್ಪನೆಗಳು ಜಾನಪದದಲ್ಲಿವೆ. ಗುಂಡಾದ ಭೂಮಿ ಸುತ್ತುತ್ತಿದೆ ಎಂಬ ವ್ಶೆಜ್ಞಾನಿಕ ಸತ್ಯವನ್ನು ಜಾನಪದರು, ಆದಿಶೇಷನ ಹೆಡೆಯ ಮೇಲೆ ಭೂಮಿ ನಿಂತಿದೆ ಎಂದು ಹೇಳಿದ್ದಾರೆ. ಆಧುನಿಕ ಜಗತ್ತಿನಲ್ಲಿ ನಾವು ಕಂಡುಕೊಂಡ ಸತ್ಯವನ್ನು ಅವರದ್ದೇ ಧಾಟಿಯಲ್ಲಿ ಜಾನಪದರು ಪರಿಕಲ್ಪನೆ ಮಾಡಿ ಚಲಾವಣೆಗೆ ಬಿಟ್ಟಿದ್ದಾರೆ ಎಂದರು.
ಸಮ್ಮೇಳನದ ಅಧ್ಯಕ್ಷ ವಿದ್ವಾನ್ ಡಾ. ಆರ್.ಕೆ ಪದ್ಮನಾಭ, ಜಿ.ಪಂ ಮಾಜಿ ಸದಸ್ಯ ನಂಜುಂಡಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು, ತಾ.ಪಂ ಸಿಇಒ ಗಿರಿಧರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಿ.ಕೆ ತಾರಾದೇವಿ, ಮುಖಂಡ ಮಂಜುನಾಥ ಇತರರು ಉಪಸ್ಥಿತರಿದ್ದರು. ರುದ್ರಪಟ್ಟಣದ ಸರ್ಕಾರಿ ಶಾಲೆ ಮಕ್ಕಳು ಜಾನಪದ ಗೀತೆ ಹಾಡಿದರು.