ಬೇಲೂರು: ಚುನಾವಣೆ ಅಕ್ರಮ ತಡೆಯಲು ಆಯೋಗ ಎಲ್ಲಾ ಕಡೆಗಳಲ್ಲಿ ಹದ್ದಿನ ಕಣ್ಣು ಇರಿಸಿದ್ದು, ತಾಲೂಕಿನ ವಿವಿಧೆಡೆ ಚೆಕ್‌ಪೋಸ್ಟ್ ಆರಂಭಿಸಿ, ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಮಮತಾ ಹೇಳಿದರು.
ತಾಲೂಕಿನ ಜಾವಗಲ್ ಚೆಕ್ ಪೋಸ್ಟ್ ಬಳಿ ವಾಹನಗಳ ತಪಾಸಣೆ ವೇಳೆ ಕಾಂಗ್ರೆಸ್ ಪಕ್ಷದ ಬ್ಯಾನರ್‌ಗಳನ್ನು ಸೀಜ್ ಮಾಡಿ ಮಾತನಾಡಿದ ಅವರು ಚುನಾವಣೆ ಆಯೋಗದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಗಡಿ ಪ್ರದೇಶದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಬಂದು ಹೋಗುವ ವಾಹನಗಳನ್ನು, ಸಂಶಯಾಸ್ಪದ ವ್ಯಕ್ತಿಗಳನ್ನು ಈ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ರಾಜಕೀಯದವರು ಆಮಿಷ ಒಡ್ಡುವ ವಸ್ತುಗಳ ಸಾಗಾಟ, ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುವ ಹಣ, ಇತರೆ ವಸ್ತುಗಳ ಪೂರೈಕೆಯನ್ನು ತಡೆಯಲು ತಾಲೂಕಿನ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ದಿನಪೂರ್ತಿ ತಪಾಸಣೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ಚೆಕ್‌ಪೋಸ್ಟ್‌ನಲ್ಲಿ ರಾತ್ರಿ -ಹಗಲು ಪಾಳಿಯಲ್ಲಿ ಪೊಲೀಸರು ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ಕೇಂದ್ರವಾಗಿರುವ ಬೇಲೂರು ಪಟ್ಟಣದಲ್ಲಿಯೂ ತಪಾಸಣೆ ಚುರುಕುಗೊಂಡಿದೆ. ತಾಲೂಕಿನ ಎಲ್ಲಾ ಭಾಗಗಳಿಂದ ಹೋಗಿ ಬರುವ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದ್ದು, ವಾಹನಗಳ ತಪಾಸಣೆ, ದಾಖಲೆಗಳ ಪರಿಶೀಲನೆ ಕಾರ್ಯ ಚುರುಕುಗೊಂಡಿದೆ. ಪೊಲೀಸ್ ತಂಡ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲೂ ವಿಶೇಷ ಗಸ್ತು ನಡೆಸುತ್ತಿದೆ ಎಂದರು.