News Karnataka
ಸಿಟಿಜನ್ ಕಾರ್ನರ್

ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

The students of Halebidu Kittur Rani Chennamma Hostel which comes under the District Social Welfare Department are protesting.
Photo Credit : Bharath

ಹಾಸನ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಹಳೇಬೀಡು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿರುವ ಅವ್ಯವಸ್ಥೆ, ಅಸುರಕ್ಷತೆ, ದೌರ್ಜನ್ಯ, ಹಣ ಬಾಕತನ, ಲೈಂಗಿಕ ದೌರ್ಜನ್ಯಕ್ಕೆ ಯತ್ನ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಕಳೆದ ರಾತ್ರಿಯಿಂದ ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೌದು ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ವಸತಿ ನಿಲಯಗಳನ್ನು ತೆರೆದು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಸರ್ಕಾರದ ಯೋಜನೆಯ ಲಾಭವನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಪ್ರಾಂಶುಪಾಲರು, ಅಟೇಂಡರ್‌ಗಳು ಕ್ಲೀನರ್‌ಗಳು ತಿಂದು ತೇಗುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ.

ಊರಿನ ಹೊರಗಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಂದ ಬೇಸತ್ತು ನೂರಾರು ಮಕ್ಕಳು ಕಳೆದ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಡುಗೆ ಮಾಡುವವರಿಂದ ಬೈಗುಳ, ಅಡುಗೆ ಮಾಡುವ ಸಹಾಯಕರಿಂದ ಹೆಣ್ಣು ಮಕ್ಕಳಿಗೆ ಅಶ್ಲೀಲ ಭಾಷೆ ಬಳಕೆ, ಸರ್ಕಾರ ಉಚಿತವಾಗಿ ನೀಡುವ ಯೋಜನೆಗಳಿಗೆ ವಿದ್ಯಾರ್ಥಿಗಳ ಪೋಷಕರಿಂದ ಪ್ರಾಂಶುಪಾಲರು ಪ್ರತಿ ವಿಚಾರಗಳಿಗೆ ಹಣ ಪಡೆಯುವುದು ಸೇರಿದಂತೆ ಹತ್ತಾರು ಆರೋಪಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ಧಾರೆ. ಇಲ್ಲಿಯ ಅಟೆಂಡರ್ ಶೃತಿ ಹಾಗೂ ಪ್ರಾಂಶುಪಾಲೆ ಗೀತಾ ಬಾಯಿ, ಮತ್ತೋರ್ವ ಗಾರ್ಡ್ ಶಿವಯ್ಯ ಸೇರಿದಂತೆ ಅಡುಗೆ ಸಹಾಯಕರು, ಸೇರಿ ಹಲವರ ವಿರುದ್ಧ ವಿದ್ಯಾರ್ಥಿಗಳು ದೂರುಗಳ ಸರಮಾಲೆಯನ್ನೇ ಹೊರಿಸಿದ್ದಾರೆ.

ಕಳೆದ ರಾತ್ರಿ ವಿದ್ಯಾರ್ಥಿಗಳ ಪ್ರತಿಭಟನೆ ಸುದ್ದಿ ತಿಳಿದು ಸ್ವತಃ ಶಾಸಕ ಕೆ.ಎಸ್.ಲಿಂಗೇಶ ಸ್ಥಳಕ್ಕೆ ಧಾವಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಮಕ್ಕಳ ಪ್ರತಿಭಟನೆ ಕೈ ಬಿಡಿಸಿ ಕ್ರಮದ ಭರವಸೆ ನೀಡಿದ್ದಾರೆ. ಆದರೆ ಇಂದೂ ಸಹ ವಿದ್ಯಾರ್ಥಿಗಳು ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪರಿಣಾಮ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುನಾಥ್ ಸೇರಿದಂತೆ ತಾಲೂಕು ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಂದ ಅಹವಾಲು ಪಡೆದಿದ್ದಾರೆ.

ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ನಮ್ಮನ್ನು ಹೊರಗಿನಿಂದ ಬರುವವರು ವಸತಿ ನಿಲಯಕ್ಕೆ ನೇರವಾಗಿಯೇ ಬಂದು ಅಶ್ಲೀಲವಾಗಿ ವರ್ತಿಸುತ್ತಾರೆ, ಸರಿಯಾಗಿ ಊಟ, ವಸತಿ ವ್ಯವಸ್ಥೆ ಇಲ್ಲ. ಊಟದಲ್ಲಿ ಹುಳು ಇರುವುದನ್ನು ಕೊಟ್ಟು ಊಟ ಮಾಡಿ ಎಂದು ಉಡಾಫೆಯಾಗಿ ವರ್ತಿಸುತ್ತಾರೆ. ಪುನೀತ್ ಎಂಬುವವನು ಹೆಣ್ಣು ಮಕ್ಕಳನ್ನು ಕೆಟ್ಟ ರೀತಿಯಲ್ಲಿ ಮುಟ್ಟಿ ಪೀಡಿಸುತ್ತಾನೆ. ಆತನಿಗೆ ಶೃತಿ ಎಂಬ ಪ್ಯೂನ್ ಸಾಥ್ ನೀಡುತ್ತಾಳೆ. ಇದೆಲ್ಲಾ ಪ್ರಿನ್ಸಿಪಾಲ್ ಗೀತಾ ಬಾಯಿಗೆ ಗೊತ್ತಿದ್ದರೂ ಆಕೆ ನಮ್ಮನ್ನು ರಕ್ಷಣೆ ಮಾಡುತ್ತಿಲ್ಲ. ಬದಲಿಗೆ ಸರ್ಕಾರದ ಸವಲತ್ತಿಗೆ ಇಂತಿಷ್ಟು ಎಂದು ಪೋಷಕರಿಂದ ಪೀಡಿಸಿ ಹಣ ತರಿಸುತ್ತಿದ್ಧಾರೆ. ಒಂದು ಪೋನ್ ಮಾಡಲು ೧೦ ರೂ. ಲಂಚ ಪಡೆಯುತ್ತಿದ್ದಾರೆ. ನಮಗೆ ನೀಡಬೇಕಾದ ತಿಂಗಳ ಪ್ಯಾಡ್ ನೀಡಲು ಸಹ ಹಣ ನೀಡಬೇಕಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾವು ಬದುಕಬೇಕಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಶಿವಯ್ಯ ಎಂಬುವವನು ಪುನೀತ್ ಎಂಬ ಗಾರ್ಡ್‌ನೊಂದಿಗೆ ಕುಡಿದು ಬಂದು ಹೆಣ್ಣು ಮಕ್ಕಳೊಂದಿಗೆ ಅಸಹ್ಯವಾಗಿ ವರ್ತಿಸುತ್ತಿದ್ದಾರೆಂದು ದೂರಿದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಯುತ್ತಿರುವ ದೌರ್ಜನ್ಯದಂತೆ ಹಾಸನ ಕೃಷಿ ಮಹಾ ವಿದ್ಯಾಲಯದಲ್ಲಿಯೂ ಸಹ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಸುದ್ದಿ ಕೇಳಿ ಬಂದಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳು ಬೇಕಾದರೆ ವಿದ್ಯಾರ್ಥಿಗಳು ಪಿ.ಟಿ. ಟೀಚರ್‌ಗಳಿಂದ ಹಿಡಿದು ಡೀನ್‌ವರೆಗೆ ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಇದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ನ್ಯಾಯಾಧೀಶರು ಖುದ್ದು ಪರಿಶೀಲನೆ ನಡೆಸಿ ಕ್ರಮ ವಹಿಸುವ ತುರ್ತು ಅಗತ್ಯವಿದೆ.

ದೌರ್ಜನ್ಯದ ವಿರುದ್ಧ ದಾಖಲಾಗದ ದೂರು:
ವಿಪರ್ಯಾಸವೆಂದರೆ ವಿದ್ಯಾರ್ಥಿಗಳು ಇಷ್ಟೆಲ್ಲಾ ಪ್ರತಿಭಟನೆ ನಡೆಸುತ್ತಿದ್ದರೂ ಹಾಗೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಯತ್ನ ನಡೆಸಲಾಗುತ್ತಿದೆ ಎಂದು ದೂರುತ್ತಿದ್ದರೂ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಮುಂದಾಗದೆ ಪ್ರಕರಣವನ್ನು ಇತ್ಯರ್ಥ ಪಡಿಸಲು ಮುಂದಾಗುತ್ತಿರುವುದು ಹಲವು ಸಂಶಯಗಳಿಗೀಡು ಮಾಡಿದೆ.

ದೌರ್ಜನ್ಯ, ಲೈಂಗಿಕ ದೌರ್ಜನ್ಯದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಪೊಲೀಸ್ ತನಿಖೆಗೆ ವಹಿಸಬೇಕಿದ್ದರೂ ಸಹ ಕೇವಲ ಕರ್ತವ್ಯದಿಂದ, ಮತ್ತೆ ಬಿಡುಗಡೆ ಮಾಡಿರುವುದು ಕಂಡು ಬಂದಿದೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *