ಹಾಸನ: ನನ್ನ ಕಣ್ಣು ಎದುರೇ ನನ್ನ ತಮ್ಮನನ್ನು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದಲ್ಲದೇ ನಮ್ಮ ಕುಟುಂಬದವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆಗಳು ನಡೆದು ಮೂವರನ್ನು ಬಂಧಿಸಿದ್ದು, ಆದ್ರೆ ಇವರ ತಂದೆಯನ್ನು ಇನ್ನೂ ಕೂಡ ಬಂಧಿಸಿರುವುದಿಲ್ಲ. ಪೊಲೀಸರು ನಿರ್ಲಕ್ಷ್ಯ ಪ್ರದರ್ಶಿಸುತ್ತಿದ್ದು, ಕೂಡಲೇ ಬಂಧಿಸಿ ನಮಗೆ ನ್ಯಾಯ ಕೊಡಿಸುವಂತೆ ಹಾಲಿ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಿರುಮನಹಳ್ಳಿ ಗ್ರಾಮದ ಯತೀಶ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ತಿರುಮನಹಳ್ಳಿ ಗ್ರಾಮದಲ್ಲಿ 2022ರ ನವೆಂಬರ್ 19ರಂದು ಬೇಲೂರು ತಾಲೂಕಿನ ತಿರುಮನಹಳ್ಳಿ ಗ್ರಾಮದಲ್ಲಿ ರಸ್ತೆ ವಿಚಾರವಾಗಿ ನನ್ನ ಸಹೋದರ ಯಶ್ವಂತ್ ಅವರೊಂದಿಗೆ ಚಂದನ್ ಹಾಗೂ ಕುಟುಂಬದವರು ಮಾತಿಗೆ ಮಾತು ಬೆಳಸಿದ್ದಾರೆ. ಈ ವೇಳೆ ಯಶ್ವಂತ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿರುವ ಅಶ್ವಥ, ಜಯಚಂದ್ರೇಗೌಡ, ನಿತಿನ್ ಕುಮಾರ್ ಸೇರಿದಂತೆ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇವರಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇವರ ತಂದೆಯನ್ನು ಪೊಲೀಸರು ಬಂಧಿಸಿಲ್ಲ. ಪ್ರಶ್ನೆ ಮಾಡಿದರೇ ಅವರ ಆರೋಗ್ಯ ಸರಿಯಾಗಿಲ್ಲ ಎಂದು ಕಾರಣ ಹೇಳಲಾಗುತ್ತಿದೆ ಎಂದರು. ಕೊಲೆ ಪ್ರಕರಣ ಸಂಬಂಧಿಸಿದಂತೆ ವಿಡಿಯೋ ಮತ್ತು ಫೋಟೋ ಎಲ್ಲಾ ಅಗತ್ಯ ದಾಖಲೆ ಒದಗಿಸಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಪೊಲೀಸ್ ಇಲಾಖೆ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರೂ ಯಾವ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಇತ್ತೀಚಿಗೆ ಕಬ್ಬಳಿ ಯಶೋಧರ ಎಂಬುವರು ಮನೆಗೆ ಬಂದು ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಕೂಡ ಹಾಕಿದ್ದಾರೆ. ನಾನು ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದು, ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿದ್ದೇನೆ. ಕರ್ತವ್ಯದಲ್ಲಿ ಇರುವಾಗ ಕುಟುಂಬಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದರು. ನ್ಯಾಯಬದ್ಧವಾಗಿ ಪೊಲೀಸರು ಕೂಡಲೇ ಕೊಲೆಗಾರರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮನವಿ ಮಾಡಿದರು.