ಬೇಲೂರು: ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಕಟ್ಟೆ ಸೋಮನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಆರು ಮನೆಗಳು ಆಹುತಿಯಾಗಿ, ಅಪಾರ ನಷ್ಟವಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಮಮತ .ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆ ಕಳೆದುಕೊಂಡ ಪುಟ್ಟರಾಜು ಅವರ ಮನೆಯಲ್ಲಿದ್ದ 55,000 ನಗದು, ಒಂದು ಸೈಕಲ್ ಹಾಗೂ ನಾಗರಾಜು ಅವರ ಮನೆಯ ಟಿವಿಎಸ್ ಎಕ್ಸೆಲ್ ಬೈಕ್, 6,000 ನಗದು, ಈರಮ್ಮ ಅವರ ಮನೆಯ ಐದು ಡ್ರಮ್ ರಾಗಿ 5,000 ನಗದು, ಸರಿತಾ ಅವರ ಮನೆಯ 1,000 ನಗದು, ಪುಟ್ಟ ಮಲ್ಲಯ್ಯ ಅವರ ಮನೆಯ 10,000 ನಗದು ಹಾಗೂ ಚಿಕ್ಕಮ್ಮ ಅವರ ಮನೆಯಲ್ಲಿದ್ದ ನಗದು ಸೇರಿದಂತೆ ಇನ್ನಿತರ ಎಲ್ಲಾ ಮನೆಯ ವಸ್ತುಗಳು, ಬೆಳ್ಳಿ, ಚಿನ್ನ, ದವಸ-ಧಾನ್ಯಗಳು, ಬಟ್ಟೆಗಳು ಸಂಪೂರ್ಣ ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲಿ 6 ಮನೆಯೂ ಸುಟ್ಟುಹೋಗಿದೆ. ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಆರು ಮನೆಗಳು ಸುಟ್ಟು ಕರಕಲಾಗಿದ್ದು, ಈ ಕುಟುಂಬಗಳು ಬೀದಿಪಾಲಾದಂತಾಗಿದೆ. ತಾತ್ಕಾಲಿಕವಾಗಿ ನೊಂದ ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಹಳೇಬೀಡು ಪಿಎಸ್‌ಐ ಎಸ್. ಜಿ. ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು, ನೊಂದ ಕುಟುಂಬಸ್ಥರು ಇದ್ದರು.