ಹಾಸನ: ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ಮಹತ್ವದ ಮಣ್ಣು ಪರೀಕ್ಷೆ ಯೋಜನೆಯಡಿ ಬಹುತೇಕ ರೈತರ ಜಮೀನಿನ ಮಣ್ಣು ಪರೀಕ್ಷೆಯನ್ನೂ ಮಾಡದೇ, ಅವೈಜ್ಞಾನಿಕ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಈ ಅವ್ಯವಹಾರ ವಿರುದ್ಧ ಜಿಲ್ಲಾ ಹಿರಿಯ ನಾಗರಿಕ ವೇದಿಕೆಯ ಸದಸ್ಯರು ಮಂಗಳವಾರ ಕೃಷಿ ಇಲಾಖೆ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಡಾ. ವೈ.ಎಸ್. ವೀರಭದ್ರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ಜಿಲ್ಲೆಯ ಯಾವೊಬ್ಬ ರೈತರ ಜಮೀನಿಗೂ ಭೇಟಿ ನೀಡದೇ ಸುಳ್ಳು ಅಂಕಿ ಅಂಶಗಳನ್ನು ಸಂಬಂಧಿಸಿದ ಕೇಂದ್ರ ಕೃಷಿ ಇಲಾಖೆಗೆ ಹಾಗೂ ಸ್ಯಾಟ್ಲೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ರೈತರ ಸರ್ವೇ ನಂ ಆಧಾರದಲ್ಲಿ ನೀರಾವರಿ ಭೂಮಿಯನ್ನು ಹತ್ತು ಎಕರೆಗೆ ಒಂದು ಯುನಿಟ್ ಹಾಗೂ ಒಣ ಭೂಮಿಯನ್ನು ಇಪ್ಪತೈದು ಎಕರೆಗೆ ಒಂದು ಯುನಿಟ್‌ನಂತೆ ಮಾಡಿ ಎಲ್ಲೋ ಕುಳಿತು ತಮಗಿಷ್ಟ ಬಂದ ಮಣ್ಣಿನ ಪೋಷಕಾಂಶಗಳನ್ನು ನಮೂದಿಸಿ ಲಕ್ಷಾಂತರ ರೈತರ ಜಮೀನಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ.
ಕೇಂದ್ರ ಸರ್ಕಾರದ ಈ ಯೋಜನೆಯು ರೈತರ ಕೃಷಿ ಹಿತದೃಷ್ಟಿಯಲ್ಲಿ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಜನರ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದರು.
ಸದರಿ ಮಣ್ಣು ಪರೀಕ್ಷಾ ಕಾರ್ಡ್ನಲ್ಲಿ ಸಾವಯವ, ಇಂಗಾಲ, ಸಾರಜನಿಕ, ರಂಜಕ, ಪೊಟಾಷ್ ಎಷ್ಟು ಪ್ರಮಾಣದಲ್ಲಿ ಇದೆ ಎಂದು ನಮೂದಿಸಲಾಗಿದೆ. ಅಲ್ಲದೆ ಜಿಂಕ್, ಬೋರಾನ್, ಮ್ಯಾಂಗನೀಸ್ ಗಂಧಕ ಅಂಶಗಳು ಇಂತಿಷ್ಟೇ ಪ್ರಮಾಣದಲ್ಲಿ ಇದೆ ಎಂದು ಕೂಡಾ ನಮೂದಿಸಿ ದುದ್ದ ಹೋಬಳಿಯ ಕೆಲ ಗ್ರಾಮಗಳಲ್ಲಿ ಈಗಾಗಲೇ ಬೋಗಸ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ದೂರಿದರು.
ಇದಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರಲ್ಲಿ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲಾ, ಈ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ದೇಶದ ಬೆನ್ನೆಲುಬು ಹಾಗೂ ಅನ್ನದಾತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗಿ ಪತ್ರ ಬರೆಯಲಾಗುವುದು ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದರು.
ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಸಿ ಕೃಷಿ ಇಲಾಖೆ ಎದುರು ಪ್ರತಿಭಟನೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಕೆ.ಮಂಜುನಾಥ, ಹಿರಿಯ ಪತ್ರಕರ್ತರಾದ ಆರ್.ಪಿ.ವೆಂಕಟೇಶ ಮೂರ್ತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಧರ್ಮೇಶ್ ಇದ್ದರು.