ಬೇಲೂರು: ತಾಲೂಕಿನ ಮದಘಟ್ಟ ಗ್ರಾಮ ಪಂಚಾಯಿತಿ ಡಣನಾಯಕನಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪಂಚಾಯಿತಿ ಮುಂದೆ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಬೇಲೂರು ತಾಲೂಕಿನ ಮದಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಡಣನಾಯಕನಹಳ್ಳಿ ಗ್ರಾಮದಲ್ಲಿ ಕಳೆದ ವರ್ಷದಿಂದ ಕುಡಿಯುವ ನೀರಿನ ಸಮಸ್ಯೆಗೆ ಇಲ್ಲಿನ ಜನಪ್ರತಿನಿಧಿಗಳು ಯಾವುದೇ ಪರಿಹಾರವನ್ನು ನೀಡದೆ, ದಿನ-ನಿತ್ಯ ಅಶುದ್ದ ನೀರನ್ನು ಕುಡಿಯುವ ಹೀನ ಸ್ಥಿತಿ ಬಂದಿದೆ. ಶೀಘ್ರವೇ ಕಳೆದ ವರ್ಷದಲ್ಲಿ ತೆಗೆಸಿದ ಕೊಳವೆಬಾವಿಗೆ ಸಂಬಂಧ ಪಟ್ಟವರು ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಪಂಚಾಯಿತಿ ಮುಂದೆ ಖಾಲಿ ಕೊಡಗಳನ್ನು ಹಿಡಿದು ಮಹಿಳೆಯರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಸುನಿತ, ಇನ್ನು ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದು, ಪ್ರತಿಭಟನೆ ವಾಪಸ್ಸು ಪಡೆಯಲಾಯಿತು. ಖಾಲಿ ಕೊಡಗಳ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಸಾಮಾಜಿಕ ಹೋರಾಟಗಾರ ಕಟ್ಟೆಗದ್ದೆ ನಾಗರಾಜ್ ಮತ್ತು ಬಸವರಾಜ್ ಹಾಗೂ ನಾಗರತ್ನ, ಕಳೆದ ಮೂರು ವರ್ಷದ ಹಿಂದೆ ಡಣನಾಯಕನ ಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ತೆಗೆಸಿದ್ದು, ವಿದ್ಯುತ್ ಸಂಪರ್ಕ ಸೇರಿದಂತೆ ಪೈಪ್‌ಲೈನ್ ಇನ್ನಿತರ ಕೆಲಸಗಳಿಗೆ ಪಿಡಿಒ ಸದಸ್ಯ ಒಬ್ಬರಿಗೆ ಗುತ್ತಿಗೆ ನೀಡಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ತೀವ್ರ ವಿಳಂಬವಾಗಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರು ಇಲ್ಲದೆ, ಜನರು ಅನಿವಾರ್ಯವಾಗಿ ಆಶುದ್ದ ನೀರು ಕುಡಿದು ಅನಾರೋಗ್ಯದಿಂದ ಆಸ್ಪತ್ರೆಗೆ ಅಲೆಯುವ ಹೀನ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಗ್ರಾಮಸ್ಥರು ಒಟ್ಟಾಗಿ ಸೇರಿ ಪಂಚಾಯಿತಿ ಮುಂದೆ ಖಾಲಿ ಕೊಡಗಳ ಮೂಲಕ ನ್ಯಾಯ ಕೇಳಿದ್ದಾರೆ. ಅಧಿಕಾರಿಗಳು ನಮಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ದೂರಿದ ಅವರು ಶೀಘ್ರವೇ ವಿದ್ಯುತ್ ಸಂಪರ್ಕ ನೀಡುವ ಮೂಲಕ ಶುದ್ದ ಕುಡಿಯುವ ನೀರನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಇಒ ಸುನಿತ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಿಳಿಸಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಡಣನಾಯಕನಹಳ್ಳಿ ಗ್ರಾಮಸ್ಥರಾದ ಶೋಭ, ವಿದ್ಯಾ, ಆಶ್ವಿನಿ, ಪುಷ್ಪ, ದರ್ಶನ್, ಪವಿತ್ರ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.