ಬೇಲೂರು: ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ತೀವ್ರವಾಗಿ ಹಾಳಾಗಿದ್ದು, ತಾತ್ಕಾಲಿಕವಾಗಿ ನಡೆಯುತ್ತಿರುವ ಗುಂಡಿ ಮುಚ್ಚುವ ತೇಪೆ ಕಾಮಗಾರಿ ಅತ್ಯಂತ ಕಳಪೆ ಮತ್ತು ವಿಳಂಬವಾಗಿ ಕೂಡಿದೆ. ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ. ರಸ್ತೆ ಸಂಪೂರ್ಣ ಧೂಳಿನಿಂದ ಕೂಡಿದ್ದು, ಜನತೆ ಅನಾರೋಗ್ಯದಿಂದ ನರಳುವ ಹೀನ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಬೇಕು ಎಂದು ಬಿಕ್ಕೋಡು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್ ಮತ್ತು ಶ್ರೀನಿವಾಸ್ ಅವರು ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ಕಳೆದ ನಾಲ್ಕು ವರ್ಷದಿಂದ ತೀವ್ರವಾಗಿ ಹದಗೆಟ್ಟಿದೆ. ಕಾರಣ ಇಲ್ಲಿ ಅತೀ ಭಾರವನ್ನು ಹೊತ್ತ ಬೃಹತ್ ಲಾರಿಗಳ ಸಂಚಾರದಿಂದ ರಸ್ತೆ ಗುಂಡಿ ಬಿದ್ದು ಮಳೆಗಾಲದಲ್ಲಿ ಸಂಚಾರ ಅಸಾಧ್ಯವಾಗಿದೆ. ಈ ಬಗ್ಗೆ ನಡೆಸಿದ ಹೋರಾಟ ಫಲದಿಂದ ಗುಂಡಿ ಮುಚ್ಚಲು ರೂ. 2.5 ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಟೆಂಡರ್ ಪಡೆದ ಗುತ್ತಿಗೆದಾರನ ಅಸಡ್ಡೆಯಿಂದ ಗುಂಡಿ ಮುಚ್ಚುವ ಕೆಲಸ ತೀರ ಕಳಪೆಯಿಂದ ಕೂಡಿದೆ.
ಇದಕ್ಕೆ ಉದಾಹರಣೆ ಎಂಬಂತೆ ಬಿಕ್ಕೋಡು ಟೌನ್ ನಡುವೆ ಹಾದು ಹೋಗುವ ಮಾರ್ಗಕ್ಕೆ ಕಳೆದ 15 ದಿನದ ಹಿಂದೆ ರಸ್ತೆಯನ್ನು ಬಗೆದು ದೊಡ್ಡ-ದೊಡ್ಡ ಜಲ್ಲಿ ಹಾಕಿದವರು ನಾಪತ್ತೆಯಾಗಿದ್ದಾರೆ. ಬರುವ ವಾಹನಗಳ ಟೈರಿಗೆ ಸಿಕ್ಕ ಜಲ್ಲಿಕಲ್ಲುಗಳು ಮನೆಗಳ ಗಾಜಿಗೆ ಮತ್ತು ಪಾದಚಾರಿಗಳಿಗೆ ತಾಗಿ ಗಾಯ ಉಂಟು ಮಾಡುತ್ತಿದೆ. ಅಲ್ಲದೆ ಸುಡು ಬಿಸಿಲಿನಲ್ಲಿ ದೂಳಿನಿಂದ ಜನರು ನಿತ್ಯ ಆಸ್ಪತ್ರೆಗೆ ಅಲೆಯುವ ಹೀನ ಸ್ಥಿತಿ ನಿರ್ಮಾಣವಾಗಿದೆ. ನೆಪ ಮಾತ್ರಕ್ಕೆ ರಸ್ತೆಗೆ ನೀರು ಹಾಕುತ್ತಾರೆ. ಕೇಳಿದರೆ ಗುತ್ತಿಗೆದಾರರು ಉಡಾಫೆಯಿಂದ ಮಾತನಾಡುತ್ತಾರೆ. ಇನ್ನು ಇಂಜಿನಿಯರ್ ಗುಂಡಿ ಮುಚ್ಚುವ ಕಾಮಗಾರಿ ಕೆಲಸ ಕಳಪೆಯಿಂದ ಕೂಡಿದೆ ನಾನು ಅನುಮತಿ ನೀಡಲ್ಲ ಎನ್ನುತ್ತಾರೆ. ನಾವುಗಳು ಯಾರಿಗೆ ದೂರು ಹೇಳಬೇಕು, ಜನಪ್ರತಿನಿಧಿಗಳು ಓಟು ಕೇಳಲು ಮನೆ-ಮನೆಗೆ ತಿರುಗುತ್ತಿದ್ದಾರೆ. ಇಲ್ಲಿ ಯಾರು ಸಾಯಬೇಕು ಎಂದು ತಿಳಿದಿಲ್ಲ ಎಂದು ಪತ್ರಿಕೆಯೊಂದಿಗೆ ತಮ್ಮ ಅಳಲು ಹೇಳಿಕೊಂಡರು.
ಕಳೆದ 2 ತಿಂಗಳಿಂದ ಆರಂಭವಾಗಿರುವ ಗುಂಡಿ ಮುಚ್ಚುವ ಕೆಲಸಕ್ಕೆ ಕಿ.ಮೀ ಒಂದಕ್ಕೆ ರೂ. 96 ಲಕ್ಷ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಗುತ್ತಿಗೆದಾರ ತನಗೆ ಇಷ್ಟ ಬಂದ ರೀತಿಯಲ್ಲಿ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ರಾಜ್ಯ ಹೆದ್ದಾರಿಗೆ ಸಂಬಂಧ ಪಟ್ಟ ಕಾರಣ ಅಧಿಕಾರಿಗಳು ಮೌನ ಮುರಿದು ತ್ವರಿತ ಕಾಮಗಾರಿಗೆ ನಡೆಸಬೇಕು. ಇಲ್ಲವಾದರೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಅಬ್ದುಲ್ ರಜಾಕ್, ಪಿಂಟೋ, ರಂಗಸ್ವಾಮಿ, ಧರ್ಮ, ಗಣೇಶ್, ಅರೀಶ್, ದೇವರಾಜ್, ಕಾಂತರಾಜ್, ವಸಂತ, ಪಾಲಾಕ್ಷ ಸೇರಿದಂತೆ ಇನ್ನೂ ಮುಂತಾದವರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.