ಹಾಸನ: ಜಿಲ್ಲೆಯ ಆಲೂರು ತಾಲೂಕಿನ ೭೮ ವರ್ಷದ ವೃದ್ದರೊಬ್ಬರು ಮಾರ್ಚ್ ೧ರಂದು ಆಲೂರಿನಲ್ಲಿ ಮೃತಪಟ್ಟಿದ್ದರು. ಇವರಿಗೆ ಹೆಚ್೩ಎನ್೨ ಪಾಸಿಟಿವ್ ಇದ್ದದು ದೃಢವಾಗಿದೆ.
ಹೆಚ್೩ಎನ್೨ ಇನ್‌ಫ್ಲುಯೆಂಜಾ ಜ್ವರಕ್ಕೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಜ್ವರ ಉಲ್ಬಣಿಸಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರೊಬ್ಬರಲ್ಲಿ ಹೆಚ್೩ಎನ್೨ ಪತ್ತೆಯಾಗಿದೆ ಇದು ಈಗ ಆತಂಕ ಮೂಡಿಸಿದೆ.
ಜ್ವರ, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದರು. ಮೃತರಿಗೆ ಹೆಚ್೩ಎನ್೨ ಇದ್ದುದನ್ನು ಇಲಾಖೆ ದೃಢಪಡಿಸಿದ್ದು, ಮತ್ತೊಮ್ಮೆ ಕೊವಿಡ್ ಸೋಂಕಿನ ಬಗ್ಗೆ ಆತಂಕ ಮೂಡಿಸಿದೆ. ಈ ವೈರಸ್ ನಿಂದ ರಾಜ್ಯದಲ್ಲಿ ಆಗುತ್ತಿರುವ ಮೊದಲ ಸಾವಾಗಿದೆ. ಅಲ್ಲದೆ, ದೇಶದಲ್ಲಿಯೇ ಮೊದಲ ಸಾವು ಇದಾಗಿದೆ. ಕೋವಿಡ್ ವೈರಸ್‌ನ ಮೊದಲ ಸಾವು ಕೂಡ ಕಲಬುರಗಿಯಲ್ಲಿ ಆಗಿದ್ದುದನ್ನು ಇಲ್ಲಿ ಸ್ಮರಿಸಬಹುದು.
ವೃದ್ದ ಸಾವಾಗಿರುವ ಗ್ರಾಮದ ಸುತ್ತಮುತ್ತಲ ಹಳ್ಳಿಗಳಲ್ಲಿ ಕ್ರಮವಾಗಿ ಹೆಚ್ಚಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅನಾರೋಗ್ಯ ಪೀಡಿತರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ. ಗಂಟಲು ದ್ರವ ಲ್ಯಾಬ್‌ಗೆ ಕಳಿಸಲಾಗಿದೆ ಎಂದು ಡಿಎಚ್‌ಒ ಡಾ. ಶಿವಸ್ವಾಮಿ ಮಾಹಿತಿ ನೀಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್೩ಎನ್೨ ಪತ್ತೆಯಾಗಿದೆ. ರಾಜ್ಯದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಕೋವಿಡ್ ನಂತರ ಆತಂಕ ಮೂಡಿಸಿರುವ ಈ ಜ್ವರದಿಂದ ಕೋಮಾರ್ಬಿಡಿಟೀಸ್ ಇರುವವರು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಆತಂಕವಿದ್ದು, ಎಚ್ಚರದಿಂದ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಡಯಾಬಿಟೀಸ್ ಮುಂತಾದ ಕಾಯಿಲೆಗಳು ಹಾಗೂ ೬೦ ವರ್ಷ ಮೇಲ್ಪಟ್ಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಜ್ವರ ಕಾಣಿಸಿಕೊಂಡವರು ಸ್ವಯಂ ಚಿಕಿತ್ಸೆ ತೆಗೆದುಕೊಳ್ಳದೇ ವೈದ್ಯರ ಭೇಟಿ ಮಾಡಲು ಹೇಳಲಾಗಿದೆ.
೧೪ ದಿನ ನಿಗಾ: ವೈರಸ್ ಪತ್ತೆಯಾದ ಹಾಗೂ ಮೃತಪಟ್ಟ ವೃದ್ದರ ತೋಟದ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ೧೪ ದಿನ ಸತತ ತಪಾಸಣೆ ಮಾಡುವ ಕುರಿತು ಸೂಚನೆ ಇದ್ದು ಅದರಂತೆ ಕ್ರಮ ವಹಿಸಲಾಗಿದೆ ಎಂದು ಡಿಎಚ್ ಒ ಶಿವಸ್ವಾಮಿ ತಿಳಿಸಿದ್ದಾರೆ.