ಬೇಲೂರು: ಮಕ್ಕಳು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಒಂದೆಡೆಯಾದರೆ ಮಕ್ಕಳ ದೇಹದಲ್ಲಿರುವ ಜಂತುಹುಳುಗಳು ಆಹಾರ ಕಬಳಿಸಿ ಮತ್ತೊಂದೆಡೆ ಮಕ್ಕಳನ್ನು ಅನಾರೋಗ್ಯಕ್ಕೆ ಸಿಲುಕಿಸುತ್ತಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆಗೊಳಿಸಲು ಹಾಗೂ ಜಂತುಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಮಾರ್ಚ್ ತಿಂಗಳಲ್ಲಿ ಮಕ್ಕಳಿಗೆ ಆಲ್ ಬೆಂಡಾಜೋಲ್ ಎಂಬ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಂತು ಹುಳು ನಿರ್ಮೂಲನೆಯಿಂದಾಗಿ ಮಕ್ಕಳು ಸೇವನೆ ಮಾಡುವ ಪೌಷ್ಠಿಕ ಆಹಾರ ಮಕ್ಕಳ ದೇಹಕ್ಕೆ ಸರಿಯಾದ ರೀತಿಯಲ್ಲಿ ಲಭ್ಯವಾಗುತ್ತದೆ. ಜಂತುಹುಳು ನಿರ್ಮೂಲನೆಗೆ ಮಾತ್ರೆ ಸೇವಿಸುವುದು ಮಾತ್ರವಲ್ಲದೆ, ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಊಟಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನದ ಅಂಗವಾಗಿ ೧ ವರ್ಷದಿಂದ ೧೯ ವರ್ಷದವರೆಗಿನ ಎಲ್ಲರಿಗೂ ಅಂಗನವಾಡಿ ಕೇಂದ್ರ, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಸೇರಿದಂತೆ ಕಾಲೇಜು ಮಕ್ಕಳಿಗೆ ಉಚಿತವಾಗಿ ಜಂತು ಹುಳು ನಿವಾರಣೆಗೆ ಮಾತ್ರೆಯನ್ನು ಮಾರ್ಚ್ ೧೩ರಂದು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವಮರಿಯಪ್ಪ, ಪುರಸಭಾ ಆರೋಗ್ಯಾಧಿಕಾರಿ ಲೋಹಿತ್, ಆರೋಗ್ಯ ನೀರಿಕ್ಷಕ ಪ್ರಕಾಶ್, ಶಿಶು ಅಭಿವೃದ್ಧಿ ಮೇಲ್ವಿಚಾರಕರು, ಆರೋಗ್ಯ ಮಹಿಳಾ ಅಧಿಕಾರಿ ಮಂಗಳಮ್ಮ, ಹಿರಿಯ ಶಿಕ್ಷಣಾಧಿಕಾರಿ ದಯಾನಂದ, ಮತ್ತಿತರರು ಹಾಜರಿದ್ದರು.