ಹಾಸನ: ಹಾಸನ ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕ್ 13.52 ಕೋಟಿ ನಿವ್ವಳ ಲಾಭದೊಂದಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಗ್ರಾಹಕರು ವಿಚಲಿತರಾಗುವ ಅಗತ್ಯವಿಲ್ಲ ಎಂದು ಬ್ಯಾಂಕಿನ ಅಧ್ಯಕ್ಷ ಸೋಮನಹಳ್ಳಿ ನಾಗರಾಜ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಎಚ್‌ಡಿಸಿಸಿ ಬ್ಯಾಂಕ್ ಮೇಲಿನ ಐಟಿ ಪರಿಶೀಲನೆ ಕುರಿತು ಗ್ರಾಹಕರಲ್ಲಿ ಗೊಂದಲ ಮೂಡಿದೆ. ಆದರೆ ಬ್ಯಾಂಕ್ ಪಾರದರ್ಶಕ ಆಡಳಿತ ನೀಡುತ್ತಿದ್ದು, ಗ್ರಾಹಕರು ಚಿಂತೆ ಪಡುವ ಅಗತ್ಯವಿಲ್ಲ ಎಂದು ನಾಗರಾಜ ಸ್ಪಷ್ಟಪಡಿಸಿದರು. 1953ರಲ್ಲಿ ಪ್ರಾರಂಭವಾದ ಎಚ್ ಡಿ ಸಿ ಸಿ ಬ್ಯಾಂಕ್ ಜಿಲ್ಲೆಯಲ್ಲಿ 34 ಶಾಖೆಗಳನ್ನು ಹೊಂದಿದ್ದು, ಈ ವರ್ಷದ ಮಾರ್ಚ್ 31ರ ಅಂತ್ಯಕ್ಕೆ 1638.98 ಕೋಟಿ ಠೇವಣಿಯೊಂದಿಗೆ, 13.52 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ ಹಾಗೂ 83.52 ಕೋಟಿ ಶೇರು ಬಂಡವಾಳವನ್ನು ಹೊಂದುವ ಮೂಲಕ 2207.67 ಕೋಟಿ ದುಡಿಯೋ ಬಂಡವಾಳವನ್ನು ಹೊಂದಿದೆ ಎಂದರು. ಬ್ಯಾಂಕ್ ಮೂಲಕ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದು, 211 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 1,98,921 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 1089.09 ಅಲ್ಪಾವಧಿ ಬೆಳೆ ಸಾಲವನ್ನು ನೀಡಲಾಗಿದ್ದು ಮಧ್ಯಮ ಅವಧಿಯ ಸಾಲವಾಗಿ 102.77 ಕೋಟಿ ಸೇರಿದಂತೆ 1191.86 ಕೋಟಿ ಸಾಲ ನೀಡಲಾಗಿದೆ.
ಇದಲ್ಲದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಗೊಡೌನ್ ನಿರ್ಮಾಣ, ಕೃಷಿ ಯಂತ್ರೋಪಕರಣ ಖರೀದಿ ಹಾಗೂ ಇತರೆ ಉದ್ದೇಶಕ್ಕಾಗಿ 12.96 ಕೋಟಿ ಸಾಲ ನೀಡಲಾಗಿದ್ದು, ಗೃಹ, ವಾಣಿಜ್ಯ ಕಟ್ಟಡ ಖರೀದಿ, ನಿವೇಶನ ಖರೀದಿ ಸೇರಿದಂತೆ ಇತರ ಕೃಷಿ ಯಂತ್ರ ಉದ್ದೇಶಗಳಿಗೆ 608.84 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕಿನ ಶಾಖೆಗಳು ಹಾಗೂ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ 4215 ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ 116.94 ಕೋಟಿ ಸಾಲ ನೀಡಲಾಗಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಬ್ಯಾಂಕುಗಳ ಆರ್ಥಿಕ ಮಾನದಂಡದ ಅನ್ವಯ ಎಚ್ ಡಿ ಸಿ ಸಿ ಬ್ಯಾಂಕ್ 2019-20 ಮತ್ತು 2020-21 ಸಾಲಿನಲ್ಲಿ ಆಡಿಟ್ ವರ್ಗಿಕರಣದಲ್ಲಿ ʻಎʼ ವರ್ಗ ಪಡೆದಿರುತ್ತದೆ ಎಂದರು. ಬ್ಯಾಂಕಿನ ವ್ಯವಹಾರ ಸಂಪೂರ್ಣ ತಾಂತ್ರಿಕವಾಗಿ ಉನ್ನತಿಕರಣಗೊಳಿಸಿದ್ದು ಆರ್.ಟಿ.ಜಿ.ಎಸ್, ಎನ್.ಈ.ಎಫ್.ಟಿ, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಸ್ತುತ 15 ಎಟಿಎಂಗಳು ಕಾರ್ಯ ನಿರ್ವಹಿಸುತ್ತಿದ್ದು, ತ್ವರಿತ ನಗದು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಬಾರ್ಡ್ ಸಹಾಯದೊಂದಿಗೆ ಮೊಬೈಲ್ ಎಟಿಎಂ ವ್ಯವಸ್ಥೆಯನ್ನು ಸಹ ಇತ್ತೀಚಿಗೆ ಒದಗಿಸಲಾಗಿದೆ ಎಂದು ತಿಳಿಸಿದರು.
ಐಟಿ ಅಧಿಕಾರಿಗಳ ಪರಿಶೀಲನೆ
ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನ ಕುರಿತು ಕೆಲವರು ನೀಡಿದ ದೂರಿನ ಅನ್ವಯ ರಾಜ್ಯ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬ್ಯಾಂಕಿನ ವಹಿವಾಟು ಹಾಗೂ ಕಾರ್ಯ ಚಟುವಟಿಕೆ ಬಗ್ಗೆ ಯಾವುದೇ ನ್ಯೂನ್ಯತೆಗಳು ಕಂಡುಬಂದಿಲ್ಲ ಎಂದು ನಾಗರಾಜ್ ತಿಳಿಸಿದರು. ಬ್ಯಾಂಕಿನ ಪ್ರತಿ ವರ್ಷದ ಆಡಳಿತ ಪಾರದರ್ಶಕವಾಗಿ ಇದ್ದು ಅಧಿಕಾರಿಗಳಿಗೆ ಸೂಕ್ತ ಸಹಕಾರದೊಂದಿಗೆ ದಾಖಲೆಯನ್ನು ಒದಗಿಸಿದ್ದೇವೆ. ಮಾರ್ಚ್ 31 ಹಾಗೂ ಏಪ್ರಿಲ್ 1ರಂದು ಎರಡು ದಿನಗಳ ಕಾಲ ಬ್ಯಾಂಕ್ ನ ದಾಖಲೆ, ಲಾಕರ್ ಹಾಗೂ ಇತರೆ ವಿಷಯದ ಕುರಿತು ಸಮಗ್ರ ಪರಿಶೀಲನೆ ನಡೆಸಿದ ಅಧಿಕಾರಿಗಳು ಬ್ಯಾಂಕಿನ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಹಾಸನ ಹಾಗೂ ಬೆಳಗಾವಿ ಬ್ಯಾಂಕ್ ಶಾಖೆ ಪರಿಶೀಲನೆ ನಡೆಸಲಾಗಿದೆ. ಆದರೆ ಬ್ಯಾಂಕ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಈ ಮೂಲಕ ಸಾಬೀತಾಗಿದೆ ಎಂದರು.