ಬೇಲೂರು: ಪ್ಲಾಸ್ಟಿಕ್‌ನಿಂದ ಪಟ್ಟಣದ ಸೌಂದರ್ಯ ಕೆಟ್ಟಿದ್ದು, ನಿಯಮ ಮೀರಿ ಪ್ಲಾಸ್ಟಿಕ್ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾಧ್ಯಕ್ಷೆ ತೀರ್ಥಕುಮಾರಿ ಹೇಳಿದರು.
ಪುರಸಭಾ ಆವರಣದಲ್ಲಿ ಮಾತನಾಡಿದ ಅವರು ಸ್ವಚ್ಛತೆ ಹಾಗೂ ಪ್ಲ್ಯಾಸ್ಟಿಕ್ ನಿಷೇಧ ಕುರಿತು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದು, ಕಾಯಿದೆ ೧೯೮೬ರ ಸೆಕ್ಷನ್ ೧೯ರ ಅನ್ವಯ ಆಯಾ ವ್ಯಾಪ್ತಿಯಲ್ಲಿ ಬರುವ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅವಕಾಶ ಇದೆ. ವ್ಯಾಪಾರಸ್ಥರು ಪಟ್ಟಣದ ಸ್ವಚ್ಛತೆ ಹಾಗೂ ಸೌಂದರ್ಯೀಕರಣ ಕಾಪಾಡಲು ಜನರು ಸಹಕರಿಸಬೇಕು ಎಂದರು.
ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಪುರಸಭೆಯ ಅಧಿಕಾರಿಗಳು ಹಲವು ಅಂಗಡಿಗಳ ಮೇಲೆ ಇಂದು ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಪ್ಲೇಟ್, ಲೋಟ, ಕಪ್ ಮತ್ತು ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಗಾಣಿಗಾರ ಬೀದಿ ರಸ್ತೆಯಲ್ಲಿರುವ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಭೆಯ ಅಧಿಕಾರಿಗಳು, ಅಂಗಡಿಗಳಲ್ಲಿ ಸಂಗ್ರಹಿಸಿಕೊಂಡಿದ್ದ ಅಂದಾಜು ೭೦ ಕೆ.ಜಿ.ಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡರು.
ಇನ್ನು ಮುಂದೆ ಅಂಗಡಿಗಳಿಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ, ಅಂಗಡಿಗಳ ವ್ಯಾಪಾರ ಪರವಾನಗಿ ರದ್ದುಪಡಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಆರೋಗ್ಯ ನಿರೀಕ್ಷಕಿ ಜೋತಿ ಮಾತನಾಡಿ, ಮರುಬಳಕೆಯಾಗದ ಪ್ಲಾಸ್ಟಿಕ್ ಭೂಮಿಯಲ್ಲಿ ಕರಗುವುದಿಲ್ಲ. ಅದನ್ನು ಸುಟ್ಟರೆ ಮಾಲಿನ್ಯ ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕ್ಯಾನ್ಸರಕಾರವಾಗಿರುವ ಕಾರಣ ಜನರು ಎಚ್ಚೆತ್ತುಕೊಳ್ಳಬೇಕು. ಪ್ಲಾಸ್ಟಿ ಕ್ ಕವರ್‌ಗಳನ್ನು ಬಳಕೆ ಮಾಡುವುದರ ಬದಲಿಗೆ ಬಟ್ಟೆ ಬ್ಯಾಗ್ ಬಳಕೆ ಮಾಡಿಕೊಳ್ಳಿ ಎಂದರು.
ಆರೋಗ್ಯಾಧಿಕಾರಿ ಲೋಹಿತ್ ಮಾತನಾಡಿ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಪ್ಲಾಸ್ಟಿಕ್ ವಸ್ತುಗಳ ನಿರ್ವಹಣೆ ಮತ್ತು ನಿಬಂಧನೆ ನಿಯಮ ೨೦೧೬ರ ಕಾಯ್ದೆಯಡಿ ಪ್ಲಾಸ್ಟಿಕ್ ಕೈಚೀಲಗಳನ್ನು ನಿಷೇಧಿಸಿದ್ದರೂ ಕೆಲವು ಅಂಗಡಿಗಳ ಮಾಲೀಕರು ಎಗ್ಗಿಲ್ಲದೇ ಪ್ಲಾಸ್ಟಿಕ್ ಕವರುಗಳನ್ನು ಮಾರಾಟ ಮಾಡುವುದು, ಗ್ರಾಹಕರಿಗೆ ಸಾಮಗ್ರಿಗಳನ್ನು ಕೊಂಡೊಯ್ಯಲು ನೀಡುತ್ತಿದ್ದರು. ಆದ್ದರಿಂದ ಇಂದು ದಾಳಿ ನಡೆಸಿ ಪ್ಲಾಸ್ಟಿಕ್ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದೇವೆ. ಈಗಾಗಲೇ ಮಾಲೀಕರಿಗೆ ಹಲವಾರು ಬಾರಿ ತಿಳುವಳಿಕೆ ನೀಡಿ, ಈ ಹಿಂದೆ ಮೂರ್ನಾಲ್ಕು ಬಾರಿ ದಾಳಿ ನಡೆಸಿದ್ದರೂ ಕೂಡ ಮತ್ತೆ ಮಾರಾಟ ಮಾಡುತ್ತಿದ್ದಾರೆ.
ಇನ್ನು ಮುಂದೆ ಇಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸಿ ಕೇಸು ದಾಖಲಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ ಸಾರ್ವಜನಿಕರು ಕೂಡಾ ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಸಾಮಾನುಗಳನ್ನು ತೆಗೆದುಕೊಂಡು ಹೋದಲ್ಲಿ ಅಂತಹವರ ವಿರುದ್ಧವೂ ಕೇಸು ದಾಖಲು ಮಾಡಲಾಗುವುದು. ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ತಿಳಿವಳಿಕೆ ಹೊಂದಬೇಕು ಎಂದರು.
ನೀರು ಸರಬರಾಜು ಸಿಬ್ಬಂದಿ ಬಿ.ಆರ್.ಕುಮಾರ, ಪೌರ ಕಾರ್ಮಿಕರಾದ ಮಲ್ಲಿಕ, ಹರೀಶ, ವಿಶ್ವ ಇದ್ದರು.