ಬೇಲೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಮಾರು ೧೫ ಕೋಟಿ ರೂ ವೆಚ್ಚದಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಕೆ ಎಸ್ ಲಿಂಗೇಶ್ ಹೇಳಿದರು.
ಪಟ್ಟಣದ ಹೊಳೆಬೀದಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಮಾರು ೧೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಸ್ಟೆಲ್ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಬೇಲೂರಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಇದಕ್ಕಾಗಿ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಪಡಿಸಲಾಗಿದೆ. ಶಿಕ್ಷಣಕ್ಕಾಗಿ ಸುಮಾರು ೨೦ ಕೋಟಿ ಹಣ ತರಲಾಗಿದೆ. ಇಲ್ಲಿಯ ವೈಡಿಡಿ ಪ್ರಥಮ ದರ್ಜೆ ಕಾಲೇಜಿಗೆ ಎರಡು ಕೋಟಿ ತಾಂತ್ರಿಕ ಭೊಧನಾ ಸಲಕರಣೆ ನೀಡಲಾಗಿದೆ.
೨ ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಅತ್ಯಾಧುನಿಕ ವಿದ್ಯಾರ್ಥಿ ನಿಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲೂ ಸಹ ಮುಖ್ಯವಾಗಿ ಮದಘಟ್ಟ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ೨೪ ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಾಣ ಮಾಡುವ ಮೂಲಕ ಅಭಿವೃದ್ಧಿ ಮಾಡಿದ್ದೇನೆ. ನಾನು ಯಾವುದೇ ಕಾರಣಕ್ಕೂ ಗುದ್ದಲಿ ಹಿಡಿದು ಪೂಜೆಗೆ ಸೀಮಿತವಾಗಿಲ್ಲ. ನನಗೆ ಮತ ನೀಡಿದ ಅವರಿಗೆ ಅಭಿವೃದ್ಧಿ ಮೂಲಕ ಅವರ ಬಳಿಗೆ ಹೋಗುತ್ತಿದ್ದೇನೆ. ನನ್ನ ಅಭಿವೃದ್ದಿ ಸಹಿಸದವರು ಹಿಂದೆ ಮುಂದೆ ಮಾತನಾಡುವವರ ವಿರುದ್ಧ ನಾನು ಮಾತನಾಡುವುದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕೇವಲ ಕಲ್ಲು ಹಾಕಿ ಪೂಜೆ ಮಾಡಿದ್ದನ್ನು ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮೋಹನ, ಗುತ್ತಿಗೆದಾರ ಶಿವಶಂಕರ ಹಾಗೂ ವಾರ್ಡ್‌ನ್ ಹಾಜರಿದ್ದರು.