ಕೊಣನೂರು: ಅರಕಲಗೂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಎ. ಮಂಜು ಹೇಳಿದರು. ರಾಮನಾಥಪುರ ಹೋಬಳಿಯ ಬೆಟ್ಟಸೋಗೆ ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯವನ್ನು ಹಿಂದೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಈಗಾಗಲೇ ಚುನಾವಣೆ ಸಂದರ್ಭದಲ್ಲಿ ಕೆಲ ಹಳ್ಳಿಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದಿದ್ದು ಅವುಗಳ ಬಗ್ಗೆ ಮೊದಲು ಗಮನಹರಿಸುತ್ತೇನೆ. ಅದೇ ರೀತಿ ಬಸವಾಪಟ್ಟಣ, ರುದ್ರಪಟ್ಟಣ ಸಂಪರ್ಕಿಸುವ ಸೇತುವೆ ಕಾಮಗಾರಿ ಅರ್ಧಕ್ಕೇ ನಿಂತಿದ್ದು ಶೀಘ್ರವೇ ಅದನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸುತ್ತೇನೆ.
ಇದೇ ರೀತಿ ಸೇತುವೆಯನ್ನು ಕೊಣನೂರು ಕಟ್ಟೇಪುರ ಸಂಪರ್ಕಿಸಲು ಈ ಬಾರಿ ಮಾಡಿಯೇ ಮಾಡುತ್ತೇನೆ ಎಂದು ತಿಳಿಸುತ್ತಾ ಶಾಸಕನಾಗಿ ಆಯ್ಕೆಯಾದ ಮೇಲೆ ಮೊದಲು ಈ ಗ್ರಾಮಕ್ಕೆ ಬಂದಿದ್ದೇನೆ. ಈ ಗ್ರಾಮದ ಮೇಲೆ ಬಹಳ ಪ್ರೀತಿಯಿದ್ದು ಈ ಗ್ರಾಮಕ್ಕೆ ಏನೇ ಅಭಿವೃದ್ಧಿ ಬೇಕಾದರೂ ಮಾಡಿಕೊಡುತ್ತೇನೆ. ನಾನು ನನ್ನ ಮುಂದಿನ ಐದು ವರ್ಷದ ಅವಧಿಯಲ್ಲಿ ದ್ವೇಷದ ರಾಜಕಾರಣ ಮಾಡದೇ ಕ್ಷೇತ್ರದ ಎಲ್ಲಾ ಗ್ರಾಮಗಳನ್ನೂ ಒಂದೇ ತರನಾಗಿ ನೋಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳು, ದೇವಾಲಯ ಸಮಿತಿಯವರು, ಪಕ್ಷದ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.