ಹಾಸನ: ಶಿರಾ ತಾಲೂಕಿನಲ್ಲಿ ಕಾಣೆಯಾಗಿದ್ದ ನಾಲ್ಕು ಜನ ಅಪ್ರಾಪ್ತ ಬಾಲಕ-ಬಾಲಕಿಯರು ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದೆ. ಮೇ 20 ರಂದು ತುಮಕೂರು ಜಿಲ್ಲೆಯ ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಪಟ್ಟನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಬಾರಿಗೆ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದರು. ಮಂಜೂಳಾ (13) ವರ್ಷ, ಭಾನು(13), ಚಿಕ್ಕಬಾಣಗೆರೆ ಗ್ರಾಮದಿಂದ ಮಧುಕುಮಾರ(13), ಮಹಾಲಕ್ಷ್ಮಿ(15) ವರ್ಷ ಈ ನಾಲ್ಕು ಜನ ಮಕ್ಕಳು ಒಂದೆ ಬಾರಿಗೆ ಮಿಸ್ಸಿಂಗ್ ಆಗಿದ್ದು, ಈ ಬಗ್ಗೆ ಪಟ್ಟನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಒಂದೇ ಗ್ರಾಮದಿಂದ ನಾಲ್ವರು ಮಕ್ಕಳು ಕಾಣೆಯಾದ ಬಗ್ಗೆ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಮಕ್ಕಳನ್ನು ಪತ್ತೆ ಮಾಡಿಕೊಂಡು ಬರುವಂತೆ ಠಾಣಾ ಪಿಎಸ್‌ಐ ಪ್ರವೀಣಕುಮಾರ್ ಹಾಗೂ ಸಿಬ್ಬಂದಿಗಳು ಹುಡುಕಾಟದಲ್ಲಿದ್ದರು. ಬಡಾವಣಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಜನ ಸಂದಣಿ ಪ್ರದೇಶ, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳ ಕಡೆ ಗಸ್ತು ಮಾಡಿ ಈ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕಿ ತಪಾಸಣೆ ಮಾಡುತ್ತಿರುವಾಗ ಮದ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಬಸ್ ಪ್ಲಾಟ್ ಫಾರಂ ನಲ್ಲಿ ಅನುಮಾನಸ್ಪದ ಹಾಗೂ ಪೋಟೋ ಚಹರೆ ಹೋಲುವ ಮಕ್ಕಳು ಇರುವುದು ಕಂಡು ಬಂದಿತ್ತು.
ಮಕ್ಕಳನ್ನು ವಿಚಾರಿಸಿದಾಗ ಕಾಣೆಯಾಗಿರುವ ಸತ್ಯಾಂಶಗಳು ಹೊರ ಬಂದಿತು. ಒಂದೇ ಬಾರಿಗೆ ನಾಲ್ಕು ಮಕ್ಕಳು ಏತಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎನ್ನುವ ಬಗ್ಗೆ ಕಾರಣಗಳು ಹೊರ ಬಂದಿರುವುದಿಲ್ಲ. ಒಟ್ಟಾರೆ ಆತಂಕಗೊಂಡಿದ್ದ ಈ ಮಕ್ಕಳ ಪೋಷಕರು ಪತ್ತೆಯಾಗಿರುವ ಬಗ್ಗೆ ವಿಚಾರ ತಿಳಿದು ಈಗ ನಿಟ್ಟುಸಿರು ಬಿಟ್ಟಿದ್ದಾರೆ.