ಹಾಸನ: ನಾಡಿನ ರೈತರ ಹಾಲು ಉತ್ಪಾದಕರ ಹಿತಕ್ಕಾಗಿ ಕೆಎಂಎಫ್ (ನಂದಿನಿ) ಉಳಿಸಿ- ಬೆಳೆಸಬೇಕು ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಇರುವ ನಂದಿನಿ ಹಾಲಿನ ಕೇಂದ್ರದಲ್ಲಿ ಸುಮಾರು 2,500 ಬೆಲೆಯ ಹಾಲಿನ ಉತ್ಪನ್ನ ಹಾಗೂ ಹಾಲು ಖರೀದಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಂದಿನಿ ಕರ್ನಾಟಕ ರಾಜ್ಯದ ರೈತರ ಬದುಕಿನ ಪ್ರಶ್ನೆಯಾಗಿದ್ದು ಸುಮಾರು 70 ಲಕ್ಷ ರೈತರು ಹಾಲು ಉತ್ಪಾದನೆ ಮಾಡಿ ನಂದಿನಿ ಡೈರಿಗೆ ಹಾಕುತ್ತಿದ್ದಾರೆ. ರೈತರೇ ಕಟ್ಟಿದಂತಹ ನಂದಿನಿ ಉಳಿಸುವ ಕೆಲಸ ಆಗಬೇಕಿದೆ ಎಂದರು.
“ನಂದಿನಿ ನಮ್ಮವಳು ನಮ್ಮ ಹಾಲು ನಮ್ಮ ಬದುಕು ನಮ್ಮ ರೈತರು” ಎಂದು ಹೇಳಿದ ಶಿವಕುಮಾರ ನಮ್ಮ ರೈತರು ಸಗಣಿ, ಬೋಸ, ಹುಲ್ಲು ಹಾಕಿದ್ದಾರೆ. ಎಲ್ಲಾ ಬೆಲೆಗಳು ಜಾಸ್ತಿಯಾಗಿದ್ದು ರೈತರಿಗೆ ಯಾವ ತರಹದ ಸಹಾಯವು ಆಗುತ್ತಿಲ್ಲ, ರೈತರಿಗೆ ಹಾಲು ಉತ್ಪಾದನೆ ಮಾಡಲು ಸರ್ಕಾರ ಸಹಾಯವನ್ನು ನೀಡುತ್ತಿಲ್ಲ, ಈ ಮಧ್ಯೆ ನಮ್ಮ ಹಾಲನ್ನು ನಾವು ಮಾರಲು ಆಗುತ್ತಿಲ್ಲ ಅಂತಹ ಪರಿಸ್ಥಿತಿಯಲ್ಲಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂದು ಹಾಲಿನ ಉತ್ಪನ್ನ ಖರೀದಿ ಮಾಡುವ ಮೂಲಕ ನಮ್ಮ ರೈತರನ್ನು ಉಳಿಸಿಕೊಳ್ಳಲು ಹೊರಟಿದ್ದೇವೆ ಎಂದ ಅವರು ಕೆಎಂಎಫ್ ಪ್ರಚಾರ ರಾಯಭಾರಿಯಾಗಿ ದಿವಂಗತ ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕೆಲಸ ಮಾಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಅವರು ನಾವು ಇದನ್ನು ತಡೆಯಲು ಆಗುವುದಿಲ್ಲ ಎಂದಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು, ಡಾ| ರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ರಾಜ್ಯಕ್ಕೆ ಮಾಡಿದ ಸೇವೆ ಸ್ಮರಿಸಬೇಕು. ರಾಜ್ಯದ ರೈತರು, ಹೆಣ್ಣು ಮಕ್ಕಳು ಬದುಕಬೇಕು ಎಂದು ದೊಡ್ಡ ದೊಡ್ಡ ನಟರು ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ.
ಆದರೆ ಮುಖ್ಯಮಂತ್ರಿಗಳೇ ನೀವು ಅವರ ಬಗ್ಗೆ ಎಷ್ಟು ಗೌರವದ ಮಾತುಗಳನ್ನು ಆಡಿದ್ದೀರಿ ಎಂದು ಪ್ರಶ್ನಿಸಿದರು, ರೇಷ್ಮೆ ಸೇರಿದಂತೆ ಇತರೆ ಬೆಳೆಗಳ ಆಮದನ್ನು ನಿಯಂತ್ರಣ ಮಾಡಲಾಗುತ್ತಿದೆ. ಹೊರಗಡೆಯಿಂದ ಬರುವ ವಸ್ತುಗಳನ್ನು ತೀರ ನಿಲ್ಲಿಸುವಂತೆ ನಾವು ಹೇಳುತ್ತಿಲ್ಲ. ಮುಕ್ತ ಮಾರುಕಟ್ಟೆ ಸರಿ, ಆದರೆ ನಮ್ಮ ರೈತರನ್ನು ಉಳಿಸಿ ಕೊಳ್ಳಬೇಕಿದ್ದು ಮೊದಲು ನಿಮ್ಮ ಮನೆಯ ರೈತರನ್ನು ಉಳಿಸಿಕೊಳ್ಳಿ ಎಂದು ಹೇಳಿದ ಶಿವಕುಮಾರ್ ಅವರು ನಷ್ಟವಾದರೂ ಸಹ ರೈತರು ಕೆಎಂಎಫ್‌ಗೆ ಹಾಲನ್ನು ಹಾಕುತ್ತಿದ್ದಾರೆ. ನೀವೇ ಪ್ರೋತ್ಸಾಹ ಕೊಟ್ಟಿದ್ದೀರಿ ಎಂದರು.
ನಮ್ಮ ಕನಕಪುರಕ್ಕೆ ಬಂದು ನೋಡಿದರೆ ಸಾಕು ಕೆಎಂಎಫ್ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಲಿದೆ. ರೇವಣ್ಣ ಅವರು ಹಾಸನದಲ್ಲಿ ಅಧ್ಯಕ್ಷರಾಗಿದ್ದಾರೆ, ಅಲ್ಲಿ ಬಾಲಚಂದ್ರ ಜಾರಕಿಹೊಳೆ ಅಧ್ಯಕ್ಷರಾಗಿದ್ದು, ಅಮೂಲ್‌ಗಿಂತ ದೊಡ್ಡದಾದ ಘಟಕವನ್ನು ಸ್ಥಾಪಿಸಿ ಕನಕಪುರದಲ್ಲಿ ರೈತರಿಗೆ ನೆರವಾಗಿದ್ದೇವೆ. ಇದನ್ನು ಉಳಿಸುವ ಕೆಲಸ ಆಗಲೇಬೇಕು ಎಂದರು.