ಹಾಸನ: ಈಗಾಗಲೇ ಜಿಲ್ಲೆಯಲ್ಲಿ ಮಳೆ ಬಿದ್ದಿರುವುದರಿಂದ ಬಿತ್ತನೆಗೆ ಭೂಮಿ ಸಿದ್ದಪಡಿಸುವ ಚಟುವಟಿಕೆ ಪ್ರಾರಂಭವಾಗಿದ್ದು, ಆಲೂಗೆಡ್ಡೆ ಬಿತ್ತನೆ ಬೀಜ ಪೂರೈಕೆಯಲ್ಲಿ ಸಮಸ್ಯೆ ಉಂಟಾಗದಂತೆ ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಆಲೂಗೆಡ್ಡೆ ಬಿತ್ತನೆ ಬೀಜ ಪೂರೈಕೆ ಹಾಗೂ ದರ ನಿಗದಿಗೆ ಸಂಬಂಧಿಸಿದಂತೆ ಪೂರ್ವ ಬಾವಿ ಸಭೆ ನಡೆಸಿದ ಅವರು ರೈತರ ಹಿತಕ್ಕೆ ಧಕ್ಕೆಯಾಗದಂತೆ ನಿಗಾವಹಿಸಲು ಸೂಚಿಸಿದರು. ಗುಣಮಟ್ಟದ ಬಿತ್ತನೆ ಬೀಜ ಪೂರೈಸಬೇಕು, ಅಗತ್ಯ ಪರೀಕ್ಷೆ ನಡೆಸಿ ನಂತರ ವಿತರಿಸಿಬೇಕು. ಬೀಜೋಪಚಾರದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಬಿತ್ತನೆ ಬೀಜ ಪೂರೈಕೆಯಲ್ಲಿ ಯಾವುದೇ ಕೃತಕ ಅಭಾವ ಸೃಷ್ಟಿಯಾಗದಂತೆ ಎಚ್ಚರವಹಿಸಿ, ಕಳಪೆ ಗುಣಮಟ್ಟದ ಬೀಜ ಮಾರಾಟವಾಗದಂತೆ ನಿಯಂತ್ರಣ ಮಾಡಿ ಎಂದು ನಿರ್ದೇಶಿಸಿದರು. ಶೈತ್ಯಾಗಾರಗಳಲ್ಲಿ ಶೇಖರಿಸಿರುವ ಬಿತ್ತನೆ ಆಲೂಗೆಡ್ಡೆ ಗುಣಮಟ್ಟ ಹಾಳಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಭುರಾಜ್ ಅವರು ಮಾತನಾಡಿ ಹಿಂದಿನ ವರ್ಷ ಇದ್ದಂತಹ ಪರಿಸ್ಥಿತಿ ಹಾಲಿ ವ್ಯವಸ್ಥೆ, ಬಿತ್ತನೆ ಅಂದಾಜು ಲಭ್ಯ ದಾಸ್ತಾನು ಬಗ್ಗೆ ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಆಲೂಗೆಡ್ಡೆಯನ್ನು ಪ್ರತಿ ಕ್ವಿಂಟಾಲ್‌ಗೆ ಗರಿಷ 1500 ರಿಂದ 1600ರವರೆಗೆ ಮಾರಾಟ ಮಾಡುವಂತೆ ದರ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು, ವರ್ತಕರ ಅಭಿಪ್ರಾಯ ಆಲಿಸಿ ಮಾರುಕಟ್ಟೆ ದರ ನಿರ್ವಹಣೆ ವೆಚ್ಚ ಎಲ್ಲಾವನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಈ ದರ ನಿಗದಿ ಪಡಿಸಿದ್ದಾರೆ. ಮೇ 12 ರ ನಂತರ ಬಿತ್ತನೆ ಆಲೂಗೆಡ್ಡೆ ಮಾರಾಟ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ರವಿ, ಕೃಷಿ ಉತ್ಪನ್ನ ಮಾರುಕಟ್ಟೆ ಮುಖ್ಯಸ್ಥರಾದ ಶ್ರೀ ಹರಿ ಅವರು ಅಭಿಪ್ರಾಯ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ದಿ) ಬಸರಿ ಗಿಡದ, ಆಲೂಗೆಡ್ಡೆ ವರ್ತಕರ ಸಂಘದ ಅಧ್ಯಕ್ಷರಾದ ಗೋಪಾಲ್, ಸೋಮನಹಳ್ಳಿ ಕಾವಲ್ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಮಹೇಶ್ ವೈ.ಎಸ್ ಹಾಗೂ ಮತ್ತಿತರರು ಹಾಜರಿದ್ದರು.