ಚನ್ನರಾಯಪಟ್ಟಣ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಮರಗಳನ್ನು ತೆರವು ಮಾಡಬಾರದೆಂದು ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಪರಿಸರ ಪ್ರೇಮಿ ಅಶೋಕ ಆಗ್ರಹಿಸಿದರು.
ಪಟ್ಟಣದ ಆವರಣದಲ್ಲಿ ಮಾತನಾಡಿ ಕಳೆದ ೧೫ ವರ್ಷಗಳ ಹಿಂದೆ ಎಪಿಎಂಸಿ ಆವರಣದಲ್ಲಿ ಸುಮಾರು ೧,೦೦೦ ವಿವಿಧ ಜಾತಿಯ ಗಿಡಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ ಅನುಮತಿ ಪಡೆದು ನೆಟ್ಟಿದ್ದವು. ಆದರೆ ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ೭೦೦ ಬಿಟ್ಟು, ಉಳಿದ ೩೦೦ ಮರಗಳನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಫಲ ಘಟಕವನ್ನು ನಿರ್ಮಾಣ ಮಾಡಲು ಟೆಂಡರ್ ನೀಡಿದ್ದಾರೆ. ಆ ಸ್ಥಳದಲ್ಲಿ ಜಾನುವಾರುಗಳ ಮಾರುಕಟ್ಟೆ ಇದ್ದು, ಅಲ್ಲಿ ೩೦೦ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಅನುಮತಿ ಕೋರಿ ತೆರವಿಗೆ ಪತ್ರವನ್ನು ಬರೆದಿದ್ದಾರೆ. ಈ ಮೂರು ಎಕರೆ ಭಾಗದಲ್ಲಿ ಮರಗಳನ್ನು ತೆರವು ಮಾಡಬಾರದು. ಹಾಗೇನಾದರೂ ತೆರವು ಮಾಡಿದರೆ ಇದರಿಂದ ಜಾನುವಾರುಗಳಿಗೆ ಮತ್ತು ರೈತರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಕೃಷಿ ಪತ್ತಿನ ಮಾರುಕಟ್ಟೆಯ ಸಮಿತಿಯವರು ಮತ್ತು ಸ್ಥಳೀಯ ಶಾಸಕರು ಇತ್ತ ಗಮನಹರಿಸಿ, ಉಗ್ರಾಣ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಸಿ. ಜಿ. ರವಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿಯೇ ಪಟ್ಟಣದ ಮಧ್ಯಭಾಗದಲ್ಲಿರುವಂತಹ ಎಪಿಎಂಸಿ ಮಾರುಕಟ್ಟೆ ಹಾಸನ ಜಿಲ್ಲೆಯ ಯಾವ ತಾಲೂಕಿನಲ್ಲೂ ಇರುವುದಿಲ್ಲ. ಇಂತಹ ಅನುಕೂಲಕರವಾದ ಮಾರುಕಟ್ಟೆಯ ಆವರಣದಲ್ಲಿ ಮರಗಳ ಮರಣ ಹೋಮ ಮಾಡುತ್ತಿರುವುದು ರೈತರಿಗೆ ಹಾಗೂ ದನ ಕರುಗಳಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಈ ಸ್ಥಳವನ್ನು ನೀಡಿದಂತಹ ರೈತರ ಮಕ್ಕಳುಗಳು ಇಂದು ಅನ್ನ ಇಲ್ಲದೆ ಬೀದಿಯನ್ನು ಸುತ್ತುವ ಪರಿಸ್ಥಿತಿ ಬಂದು ಒದಗಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯವರು ಪ್ರತಿ ಕುಂಟೆ ಖರೀದಿಸಿ, ಇಂದು ವ್ಯಾಪಾರಸ್ಥರಿಗೆ, ಖಾಸಗಿ ವ್ಯಕ್ತಿಗಳಿಗೆ ಈ ಸ್ಥಳವನ್ನು ನೀಡಿ ಆದಾಯ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿದ್ದರೆ ರೈತ ಸಂಘದಿಂದ ಮತ್ತು ವಿವಿಧ ಪರ ಸಂಘಟನೆಗಳಿಂದ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮೀಸೆ ಮಂಜಣ್ಣ, ಹಸಿರು ಸೇನೆ ಮತ್ತು ರಾಜ್ಯ ರೈತ ತಾಲೂಕು ಅಧ್ಯಕ್ಷ ಶಿವಣ್ಣ, ರೈತ ಮುಖಂಡರಾದ ಟೈಲರ್ ಕುಮಾರ್, ಅಪ್ಪಾಜಿ ಗೌಡ, ಮಂಜಣ್ಣ, ಶೆಟ್ಟಿಹಳ್ಳಿ ಶ್ರೀನಿವಾಸ್, ಚಿಕ್ಕ ಮತಿಗಟ್ಟ ಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.