ಬೇಲೂರು: ಕೇಶವನಗರ ಗ್ರಾಮದ ೩೫ ವರ್ಷದ ವೇದ ಎಂಬ ಮಹಿಳೆ ಕುಡಿತದ ದುಶ್ಚಟಕ್ಕೆ ಬಲಿಯಾಗಿದ್ದು, ಅಕ್ರಮ ಮದ್ಯ ಮಾರಾಟ ಇದಕ್ಕೆ ಕಾರಣ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಮುನಾ ಅಣ್ಣಪ್ಪ ನೇರವಾಗಿ ಆರೋಪಿಸಿದರು.
ಹೋಬಳಿಯ ಕೇಶವನಗರದಲ್ಲಿ ಅಕ್ರಮ ಮದ್ಯಪಾನ ಮಾರಾಟದಿಂದ ಮಹಿಳೆಯೋರ್ವಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ತಡರಾತ್ರಿ ಪೊಲೀಸ್ ಠಾಣೆಗೆ ಆಗಮಿಸಿ ಕಿರಾಣಿ ಅಂಗಡಿಗಳಲ್ಲಿ ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ತಂದೆ ತಾಯಂದಿರು ಈ ರೀತಿಯ ಕುಡಿತದ ದಾಸ್ಯಕ್ಕೆ ಒಳಗಾದರೆ ಮಕ್ಕಳು ಸಹ ಅದೇ ದಾರಿ ಹಿಡಿಯುತ್ತಾರೆ. ಕುಡಿತದಿಂದ ಪೋಷಕರು ಮೃತಪಟ್ಟರೆ ಮಕ್ಕಳು ಅನಾಥರಾಗುತ್ತಾರೆ. ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಾರದೆಂದರೆ ಮಹಿಳೆಯರು ಒಗ್ಗಟ್ಟಾಗಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಲು ಹೋರಾಟ ಮಾಡಬೇಕು ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷೆ ವೀಣಾ ಈರಪ್ಪ ಮಾತನಾಡಿ, ನಮ್ಮ ಗ್ರಾಮದಲ್ಲಿರುವ ಅಂಗಡಿಗಳಲ್ಲಿ ಸಾರಾಯಿಯನ್ನು ಮಾರಾಟ ಮಾಡುತ್ತಾರೆ. ಇದರಿಂದ ಮಹಿಳೆ ಮೃತಪಟ್ಟಿದ್ದು, ಮೃತರಿಗೆ ಒಬ್ಬಳು ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಮಗ ಹೇಗಾದರೂ ಬದುಕು ಸಾಗಿಸುತ್ತಾನೆ. ಆದರೆ ಹೆಣ್ಣಿಗೆ ತಾಯಿಯ ಅವಶ್ಯಕತೆಯಿರುವುದರಿಂದ ಅಕ್ರಮ ಸಾರಾಯಿ ದಂಧೆ ತಾಯಿಯನ್ನು ಬಲಿ ಪಡೆದಿದ್ದು, ಮಗಳ ಉಜ್ವಲ ಭವಿಷ್ಯವನ್ನು ಹಾಳುಮಾಡಿದೆ. ಅಬಕಾರಿ ಇಲಾಖೆ ಅಕ್ರಮ ಸಾರಾಯಿ ಮಾರಾಟಕ್ಕೆ ಶೀಘ್ರವಾಗಿ ಕಡಿವಾಣ ಹಾಕದಿದ್ದಲ್ಲಿ ಮಹಿಳಾ ಸಂಘಟನೆಗಳು ಉಗ್ರವಾದ ಹೋರಾಟ ಮಾಡಲು ಸಿದ್ಧವಿರುವುದು ಎಂದು ಎಚ್ಚರಿಸಿದರು.
ಈ ವೇಳೆ ವಕೀಲ ರಾಜು, ವಿರಾಜು, ಭದ್ರೇಶ್, ಅಣ್ಣಪ್ಪ, ತಮ್ಮಣ್ಣ, ಲಕ್ಷ್ಮಣ, ಪುಟ್ಟಮ್ಮ, ಮಂಜುಳ, ಸುಬ್ಬಣ್ಣ, ಸೂರಿ, ಶಿವಣ್ಣ, ದೇವರಾಜು, ರಾಜು, ರುದ್ರೇಶ, ದೇವರಾಜು ಹಾಗೂ ಕೇಶನನಗರದ ಗ್ರಾಮಸ್ಥರು ಹಾಜರಿದ್ದರು.