ಅರಸೀಕೆರೆ: ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜಕೀಯ ಕ್ಷೇತ್ರದಲ್ಲಿ ಚರ್ಚೆ ಆಗಬೇಕೇ ವಿನಃ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುವ ಮೂಲಕ ತಾವೇ ಚರ್ಚೆಗೆ ಗ್ರಾಸವಾಗುವುದು ಜನ ಪ್ರತಿನಿಧಿಯ ಲಕ್ಷಣವಲ್ಲ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ನಾಲ್ಕನೇ ಹಂತದ ಯೋಜನೆ ಅಡಿ ನಗರದ 31 ವಾರ್ಡ್‌ಗಳಿಗೆ ಬಿಡುಗಡೆಯಾಗಿರುವ 30 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸೇರಿದಂತೆ ನೂತನವಾಗಿ ನಿರ್ಮಿಸಲಾಗಿರುವ ತಾಲೂಕು ಉಪ ಕಾರಾಗೃಹ, ಪಶು ಆಸ್ಪತ್ರೆ, ಅರಸೀಕೆರೆ ಹಾಗೂ ಬಾಣವರದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಭವನ, ನಗರದ ಜೇನುಕಲ್ ನಗರ ಬಡಾವಣೆಯಲ್ಲಿ ನಿರ್ಮಿಸಿರುವ ಅರಸು ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಭಿವೃದ್ಧಿಗೆ ಸಂಬಂಧಿಸಿದಂತೆ ಹಿಂದುಳಿದಿದ್ದ ಅರಸೀಕೆರೆ ತಾಲೂಕು, ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಬಳಿಕ ಮಾದರಿ ಕ್ಷೇತ್ರವಾಗಿ ರೂಪಗೊಳ್ಳುತ್ತಿದೆ. 2018ರ ಚುನಾವಣೆಯ ಬಳಿಕ ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿಗೂ ಹೆಚ್ಚಿನ ಅನುದಾನವನ್ನು ಸರ್ಕಾರದ ನಾನಾ ಯೋಜನೆಗಳ ಮೂಲಕ ತಂದಿದ್ದೇನೆ. ಅಲ್ಲದೆ ನಗರ ಸೇರಿದಂತೆ ಗ್ರಾಮೀಣ ಭಾಗದ ಜನತೆಗೆ ಮುಂದಿನ ಐದಾರು ದಶಕಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಬಾದಿಸದಂತೆ ಶಾಶ್ವತ ಯೋಜನೆಯನ್ನು ಕೈಗೊಳ್ಳಲಾಗಿದೆ. ಹೋಬಳಿವಾರು ನಿರ್ಮಾಣಗೊಂಡಿರುವ ವಸತಿ ಶಾಲೆಗಳು ನಾನು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಆದ್ಯತೆಯನ್ನು ತೋರುತ್ತಿದೆ ಹೀಗೆ ಕ್ಷೇತ್ರದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ವೈಯಕ್ತಿಕವಾಗಿ ನನಗಷ್ಟೇ ಅಲ್ಲ ಕ್ಷೇತ್ರದ ಜನತೆಯ ಮೆಚ್ಚುಗೆಗೂ ಕಾರಣವಾಗಿದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಎತ್ತಿನಹೊಳೆ ಯೋಜನೆ ಅಡಿ ತಾಲೂಕನ್ನು ಸೇರಿಸಲು ಸದನದ ಒಳಗೆ ಹಾಗೂ ಹೊರಗೆ ನಾನು ನಡೆಸಿದ ಹೋರಾಟ ನನಗೆ ಮಾತ್ರ ಗೊತ್ತು. ಆರಂಭದಲ್ಲಿ ಈ ಕುರಿತು ಅಪಸ್ವರ ಎತ್ತುತ್ತಿದ್ದರು, ಇಂದು ಪರವಾಗಿ ಮಾತನಾಡುತ್ತಿದ್ದಾರೆ. ಇದು ಅಭಿವೃದ್ಧಿ ಅಲ್ಲವೇ ಎಂದು ರಾಜಕೀಯವಾಗಿ ತಮ್ಮನ್ನು ವಿರೋಧಿಸುವವರಿಗೆ ಮಾತಿನ ಮೂಲಕವೇ ಚಾಟಿ ಬೀಸಿದರು.
ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಟಿಕೆರೆ ಪ್ರಸನ್ನಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರು ಹಾಗೂ ಹಾಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಿದರೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಬೆನ್ನು ಬಿದ್ದು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಗೊಳಿಸುವಲ್ಲಿ ಶಾಸಕ ಶಿವಲಿಂಗೇಗೌಡರ ಕಾರ್ಯವೈಕರಿ ಮೆಚ್ಚುವಂಥದ್ದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕಾಂತೇಶ, ಪೌರಾಯುಕ್ತ ಕೇಶವ ಎಂ ಚೌಗುಲೆ, ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಹಿರಿಯ ಸದಸ್ಯ ಎಂ ಸಮಿವುಲ್ಲಾ, ಸದಸ್ಯರಾದ ವೆಂಕಟಮುನಿ, ಶ್ವೇತಾ ರಮೇಶ ಮಾತನಾಡಿದರು. ವೇದಿಕೆಯಲ್ಲಿ ಕೇಂದ್ರ ಕಾರಾಗೃಹ ಮೈಸೂರಿನ ಮುಖ್ಯ ಅಧ್ಯಕ್ಷರಾದ ಕೆ.ಸಿ ದಿವ್ಯಶ್ರೀ, ಗ್ರೇಡ್೨ ತಹಶೀಲ್ದಾರ ಪಾಲಾಕ್ಷ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿ, ನಾರಾಯಣಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಶಿವಮೂರ್ತಿ, ನಗರ ಸಭೆ ಸದಸ್ಯರಾದ ಗಣೇಶ, ಡಿಶ್ ರಾಜು, ಮನೋರ ಮೇಸ್ತ್ರಿ, ಶುಭ ಮನೋಜ, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಹಿರಿಯಣ್ಣ ಯಾದಾಪುರ ತೇಜೇಶ, ಮತ್ತಿತರು ಉಪಸ್ಥಿತರಿದ್ದರು.