ಬೇಲೂರು: ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡದ ಅನಾವರಣ ಹಾಗು ವಿವಿದ ಕೃಷಿ ಯಂತ್ರಗಳ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ತಾಲೂಕಿನ ಅರೇಹಳ್ಳಿ ಹೋಬಳಿಯ ನಾಡಕಛೇರಿ ಹತ್ತಿರದಲ್ಲಿ ಕೆಲವು ವರ್ಷಗಳ ಹಿಂದೆ ಹಲವು ಮುಖಂಡರ ಶ್ರಮದ ಫಲವಾಗಿ ನಿವೇಶನ ಮಂಜೂರಾಗಿದ್ದು, 2020ನೇ ಇಸವಿಯಲ್ಲಿ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೂತನ ಕಟ್ಟಡದ ಉದ್ಘಾಟನೆ ಮತ್ತು ವಿವಿದ ಕೃಷಿ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದ ಶಾಸಕ ಕೆ.ಎಸ್ ಲಿಂಗೇಶ ಮಾತನಾಡಿ, ರೈತರು ಹಾಗೂ ರೈತ ಸಂಪರ್ಕ ಕೇಂದ್ರ ಇವುಗಳೆರಡು ಒಂದು ಕೊಂಡಿಯ ಹಾಗೆ. ರೈತ ಸಂಪರ್ಕ ಕೇಂದ್ರವು ರೈತರ ಬಿತ್ತನೆಯಿಂದ ಹಿಡಿದು ಬೆಳೆ ಕಟಾವುವರೆಗಿನ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಎಲ್ಲಾ ಕೃಷಿ ಯಂತ್ರೋಪಕರಣಗಳು, ಬಿತ್ತನೆ ಬೀಜ ಹಾಗು ಇನ್ನಿತರ ಸವಲತ್ತುಗಳನ್ನು ವಿವಿದ ಯೋಜನೆಗಳ ಮೂಲಕ ಸಬ್ಸಿಡಿ ದರದಲ್ಲಿ ದೊರಕಿಸಿ ಕೊಡುವ ಮುಖ್ಯ ಕೇಂದ್ರವಾಗಿದೆ. ಅದೆ ರೀತಿ ರೈತರು ಬೆಳೆದ ಕೃಷಿಯಲ್ಲಿ ಯಾವುದಾದರು ರೋಗ ರುಜಿನಗಳು ಬಂದರೆ ಮಾರ್ಗೋಪಾಯಕ್ಕಾಗಿ ತಾಲೂಕು ಕೇಂದ್ರ ಅಥವಾ ಜಿಲ್ಲಾ ಕೇಂದ್ರ ಅಲೆದಾಡುವ ಬದಲು ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಪರಿಹಾರ ಪಡೆದುಕೊಳ್ಳಬೇಕು ಎಂದರು.
ಕೃಷಿ ಅಧಿಕಾರಿ ಪ್ರಕಾಶ ಯು.ಎಂ. ಮಾತನಾಡಿ, ಆರಂಭಗೊಂಡ ಕಟ್ಟಡದ ಕಾಮಗಾರಿಯು ಕಳೆದ ಎರಡು ತಿಂಗಳ ಹಿಂದೆ ಸುಸರ್ಜಿತವಾಗಿ ನಿರ್ಮಾಣಗೊಂಡು ಈ ದಿನ ನೆರೆದಿರುವ ವೇದಿಕೆ ಗಣ್ಯರ, ರೈತ ಬಾಂಧವರ ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ರೈತ ಬಾಂಧವರ ಸೇವಾ ಕಟ್ಟಡವಾಗಿ ಅನಾವರಣಗೊಂಡಿದೆ. ಈ ಸುಸಂದರ್ಭಕ್ಕೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗು ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮ ಬಿ, ಮುನೆರಾ, ವೀರೇಶ್, ಚಂದ್ರಶೇಖರ್ ಶೆಟ್ಟಿ, ದೊಡ್ಡವಿರೇಗೌಡ, ಇತರರು ಇದ್ದರು.