ಚನ್ನರಾಯಪಟ್ಟಣ: ತಾಲೂಕಿನ ಪಟ್ಟಣದಲ್ಲಿ ಸಂಚಾರಿ ಪೊಲೀಸ್ ಠಾಣೆ ಪ್ರಾರಂಭವಾದ ಮೇಲೆ ಅಪಘಾತಗಳನ್ನು ತಡೆಯಲು, ವಾಹನ ಸಂಚಾರ ಸುಗಮಗೊಳಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಕಾರಾತ್ಮಕ ವಾತಾವರಣ ನಿರ್ಮಾಣಗೊಂಡಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಸಂಚಾರಿ ಪೊಲೀಸ್ ಠಾಣೆ ಕಟ್ಟಡವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶಾಂತಿ ಮತ್ತು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಕಡೆಯೂ ಪೊಲೀಸ್ ಠಾಣೆಗಳು ಉನ್ನತೀಕರಿಸುತ್ತಿದ್ದು, ಚನ್ನರಾಯ ಪಟ್ಟಣದಲ್ಲೂ ಸಹ ೨೦೧೬ರಲ್ಲಿ ನೂತನ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿ ಕಾರ್ಯಾರಂಭ ಮಾಡಿದ್ದರು. ಸ್ವಂತ ಕಟ್ಟಡವಿಲ್ಲದೆ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇಂದು ೧ ಕೋಟಿ ೩೧ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡು ಪೋಲಿಸ್ ಇಲಾಖೆಗೆ ಆಡಳಿತಾತ್ಮಕವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗಿದೆ ಎಂದರು.
ತಾಲ್ಲೂಕಿನಾದ್ಯಂತ ಎಲ್ಲಾ ಹೋಬಳಿಗಳಲ್ಲಿಯೂ ಪೊಲೀಸ್ ವಸತಿಗೃಹಗಳ ಕೊರತೆ ಇಲ್ಲ ಆದರೆ ಪೋಲಿಸ್ ಆರಕ್ಷಕರು ತಂಗಲು ಐದು ವಸತಿ ಗೃಹಗಳ ಅಗತ್ಯತೆ ಇದ್ದು ಗೃಹ ಸಚಿವರಿಗೆ ಈ ಹಿಂದೆಯೇ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿ ಐದು ವಸತಿ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ನುಗ್ಗೆಹಳ್ಳಿ ರಸ್ತೆಯಲ್ಲಿರುವ ೧೦ ಗುಂಟೆ ಸರ್ಕಾರಿ ಜಮೀನನ್ನು ಪಟ್ಟಣದ ಎಲ್ಲಾ ಪೊಲೀಸ್ ಠಾಣೆಗಳ ಅಪಘಾತ ಹಾಗೂ ಮುಟ್ಟುಗೋಲು ಹಾಕಿಕೊಂಡಂತಹ ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಮೀನನ್ನು ಕಂದಾಯ ಇಲಾಖೆಯಿಂದ ತಮ್ಮ ಇಲಾಖೆಗೆ ವರ್ಗಾಯಿಸಿಕೊಡಲಾಗುವುದೆಂದು ತಿಳಿಸಿದರು.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ ಹಾಸನ ಜಿಲ್ಲೆಯ ಮಟ್ಟಕ್ಕೆ ಚನ್ನರಾಯಪಟ್ಟಣ ನಗರವು ಬೆಳೆಯುತ್ತಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಹಾಸನ ಜಿಲ್ಲಾ ಅಪಾರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಪುರಸಭೆ ಅಧ್ಯಕ್ಷೆ ರೇಖಾ ಅನಿಲ್, ಸದಸ್ಯ ನವೀನ್, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ನಿರ್ದೇಶಕ ಅನಿಲ್ ಮರಗೂರು, ತಾಲೂಕಿನ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.