ಹೊಳೆನರಸೀಪುರ: ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು, ಅಪಘಾತ ರಹಿತ ಚಾಲನೆಯನ್ನು ಮಾಡುವ ಮೂಲಕ ಕೆ.ಎಸ್.ಆರ್.ಟಿ.ಸಿ ಮತ್ತು ಹೊಳೆನರಸೀಪುರ ಘಟಕಕ್ಕೆ ಕೀರ್ತಿ ತಂದ ಚಾಲಕರ ಸೇವೆ ಅಭಿನಂದನೀಯ ಮತ್ತು ಶ್ಲಾಘನೀಯ ಎಂದು ಶಾಸಕ ಹೆಚ್.ಡಿ. ರೇವಣ್ಣ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗದ ವತಿಯಿಂದ ಹೊಳೆನರಸೀಪುರ ಬಸ್ ನಿಲ್ದಾಣದ ವಿಸ್ತರಿಸಿದ ಕಟ್ಟಡವನ್ನು ಹಾಗೂ ಬಸ್ ಘಟಕದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹೊಳೆನರಸೀಪುರದ ಬಸ್ ನಿಲ್ದಾಣದ ವಿಸ್ತರಿಸಿದ ಕಟ್ಟಡವನ್ನು ಮತ್ತು ಬಸ್ ಘಟಕದ ವಸತಿ ಗೃಹ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸುಮಾರು ನಾಲ್ಕು ಕೋಟಿ ಐವತ್ತು ಲಕ್ಷ ರೂಪಾಯಿಗಳಿಗೂ ಹೆಚ್ಚಿನ ವೆಚ್ಚವನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಪ್ರಸ್ತುತ ಹೊಳೆನರಸೀಪುರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ನಿರೀಕ್ಷಣಾ ಆವರಣ, ಆಸನ ಮತ್ತು ಶೌಚಾಲಯ ವ್ಯವಸ್ಥೆ, ವಿಶೇಷ ಚೇತನರ ಶೌಚಾಲಯ, ವಾಣಿಜ್ಯ ಮಳಿಗೆಗಳು ಮತ್ತು ಸಂಚಾರ ನಿಯಂತ್ರಕರ ಕೊಠಡಿ, ಉಪಹಾರ ಗೃಹ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಿಂದ ಅವಶ್ಯಕತೆ ಇರುವ ಹಳ್ಳಿಗಳಿಗೆ ಮತ್ತಷ್ಟು ಬಸ್ ಸಂಚಾರದ ಮಾರ್ಗವನ್ನು ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ವಿಶೇಷ ಚೇತನರಿಗೆ ಬಸ್ ಪಾಸ್, ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಮತ್ತು ಉದ್ಯೋಗಿಗಳಿಗೆ ಮಾಸಿಕ ಬಸ್ ಪಾಸ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಮತ್ತು ನೌಕರ ವರ್ಗದ ಸೇವೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇಂದು ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವ, ವಾಲ್ಮೀಕಿ ಜನಾಂಗದ ಸಮುದಾಯ ಭವನಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗದ ಆಡಳಿತ ಮತ್ತು ಸಿಬ್ಬಂದಿ ವರ್ಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎಸ್.ಅರುಣ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗವು ೧೯೬೧ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ೬೩ನೇ ವರ್ಷದತ್ತ ಮುನ್ನುಗ್ಗುತ್ತಿದೆ. ಪ್ರಸ್ತುತ ಹಾಸನ – ೧, ಹಾಸನ – ೨, ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ, ರಾಮನಾಥಪುರದಲ್ಲಿ ೬ ಘಟಕಗಳನ್ನು ಹೊಂದಿದ್ದು, ೧೭ ಬಸ್ ನಿಲ್ದಾಣಗಳಿದ್ದು, ೨೫೫೩ ಸಿಬ್ಬಂದಿಗಳೊಂದಿಗೆ ೫೪೧ ಅನುಸೂಚಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ೧.೮೭ ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಹಾಸನ ಜಿಲ್ಲೆಯು ಸಂಪೂರ್ಣವಾಗಿ ರಾಷ್ಟ್ರೀಕರಣಗೊಂಡಿದ್ದು, ಜಿಲ್ಲೆಯಲ್ಲಿ ೧,೪೭೪ ಹಳ್ಳಿಗಳಿದ್ದು, ಅದರಲ್ಲಿ ಎಲ್ಲಾ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಮಾನ್ಯ ಅನುಸೂಚಿಗಳು ೨೦೪, ವೇಗದೂತ ಅನುಸೂಚಿಗಳು ೩೦೩, ನಗರ ಸಾರಿಗೆ ೩೦, ರಾಜಹಂಸ ೪ ಬಸ್ ಇದೆ. ಹೊಳೆನರಸೀಪುರ ಬಸ್ ಘಟಕವು ೧೯೯೮ರಲ್ಲಿ ಪ್ರಾರಂಭವಾಗಿದ್ದು, ಸದರಿ ವ್ಯಾಪ್ತಿಯಲ್ಲಿ ೨ ನಿಲ್ದಾಣಗಳಿದೆ, ೯೩ ಅನುಸೂಚಿಗಳನ್ನು ೯೫ ವಾಹನಗಳಿಂದ ನಿರ್ವಹಣೆ ಮಾಡಲಾಗುತ್ತಿದ್ದು, ೪೯ ವೇಗದೂತ, ೪೪ ಸಾಮಾನ್ಯ ಅನುಸೂಚಿಗಳು ಕಾರ್ಯ ನಿರ್ವಹಿಸುತ್ತಿದೆ.
ತಾಲೂಕಿನ ೨೧೧ ಹಳ್ಳಿಗಳಿಗೂ ಬಸ್ ಸಂಚಾರ ವ್ಯವಸ್ಥೆಯನ್ನು ಒದಗಿಸಲಾಗಿದೆ. ಪ್ರತಿ ನಿತ್ಯ ೩೪,೩೬೩ ಕಿಲೊಮೀಟರ್ ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯವೂ ೨೨.೦೦೦ ಪ್ರಯಾಣಿಕರು ಹಾಗೂ ೬೦೦೦ ವಿದ್ಯಾರ್ಥಿಗಳು ಸಾರಿಗೆ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ಸದರಿ ಘಟಕದಿಂದ ಅಂತರ ಜಿಲ್ಲಾ ಮತ್ತು ಅಂತರ ರಾಜ್ಯಕ್ಕೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಯೋಧರಿಗೆ ಉಚಿತ ಬಸ್ ಪಾಸ್ ಮತ್ತು ಇನ್ನಿತರರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವ ಮೂಲಕ ಕೆ.ಎಸ್.ಆರ್.ಟಿ.ಸಿ ಸಮಾಜಮುಖಿಯಾಗಿ ಸೇವೆಯನ್ನು ಸಲ್ಲಿಸಿ ಜನ ಮೆಚ್ಚುಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಇಂದು ಶಾಸಕರು ಕೆ.ಎಸ್.ಆರ್.ಟಿ.ಸಿ ಹೊಳೆನರಸೀಪುರ ಘಟಕದ ಅಪಘಾತ ರಹಿತ ಚಾಲನೆ ಮಾಡಿದ ೨೪ ಚಾಲಕರಿಗೆ ಬೆಳ್ಳಿ ಪದಕವನ್ನು ವಿತರಣೆ ಮಾಡಿದರು. ಕೆ.ಎಸ್.ಆರ್.ಟಿ.ಸಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಪುರಸಭೆ ಅಧ್ಯಕ್ಷೆ ಎನ್. ಜ್ಯೋತಿ ಮಂಜುನಾಥ, ಉಪಾಧ್ಯಕ್ಷೆ ಜಿ.ತ್ರಿಲೋಚನಾ ಸೋಮೇಶ, ಪುರಸಭೆ ಸದಸ್ಯ ಕೆ.ಶ್ರೀಧರ ( ಎವಿಎಸ್) ಮತ್ತು ಇನ್ನಿತರರು ಉಪಸ್ಥಿತರಿದ್ದರು.