ಅರಸೀಕೆರೆ: ರೈತ ಬೆಳೆಯುವ ಬೆಳೆಗೆ ಬಂಡವಾಳಶಾಹಿಗಳು ಬೆಲೆ ನಿಗದಿ ಮಾಡುವ ದುಸ್ಥಿತಿ ದೇಶದಲ್ಲಿದ್ದು, ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅರಸೀಕೆರೆ ಸೇರಿದಂತೆ ಮಧ್ಯ ಕರ್ನಾಟಕದ ೪೦ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೆಂಗು ಮತ್ತು ಕೊಬ್ಬರಿ ಪ್ರಮುಖ ಬೆಳೆಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ತೆಂಗು ಮತ್ತು ಕೊಬ್ಬರಿಗೆ ವೈಜ್ಞಾನಿಕ ಬೆಲೆ ಸಿಗದೇ ಇರುವುದರಿಂದ ತೆಂಗು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಸದನದ ಒಳಗೂ-ಹೊರಗೂ ಹೋರಾಟ ನಡೆಸಿ ಸರ್ಕಾರದ ಗಮನಕ್ಕೆ ತಂದರೂ ರಾಜ್ಯ ಸರ್ಕಾರ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ ೧,೦೦೦ ಪ್ರೋತ್ಸಾಹ ಧನವನ್ನು ನೀಡದೆ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ೧೧,೭೫೦ ರೂ. ಗೆ ಕ್ವಿಂಟಲ್ ಕೊಬ್ಬರಿ ಖರೀದಿಗೆ ಮುಂದಾಗಿರುವುದರಿಂದ ತೆಂಗು ಬೆಳೆಗಾರರಿಗೆ ಹೇಳಿಕೊಳ್ಳುವಂತ ಲಾಭ ಸಿಗುವುದಿಲ್ಲ. ಕನಿಷ್ಠ ೧೫,೦೦೦ ಬೆಂಬಲ ಬೆಲೆ ನೀಡಿ ಖರೀದಿಸಿದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ರೈತರಿಗೆ ನ್ಯಾಫೆಡ್ ಕೇಂದ್ರಕ್ಕೆ ಬಿಡುವ ಕೊಬ್ಬರಿಯಿಂದಲೂ ಯಾವುದೇ ಲಾಭವಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನ್ಯಾಫೆಡ್ ಖರೀದಿ ಕೇಂದ್ರಕ್ಕೆ ಕೊಬ್ಬರಿ ಬಿಡಲು ಬರುವ ರೈತರಿಗೆ ಸಲ್ಲದ ನಿಬಂಧನೆಗಳನ್ನು ಏರಿ ವಿನಾಕಾರಣ ತೊಂದರೆ ನೀಡದೆ ರೈತರು ತರುವ ಕೊಬ್ಬರಿಯನ್ನು ನಿಯಮಾನುಸರ ಖರೀದಿಸಿ, ಆದರೆ ಖರೀದಿಗೆ ಸಂಬಂಧಿಸಿದಂತೆ ದೂರು ಮತ್ತು ಆರೋಪಗಳು ಕೇಳಿ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ರೈತ ಸಂಘದ ಸಂಚಾಲಕ ಬೋರನಕಪ್ಪಲು ಶಿವಲಿಂಗಪ್ಪ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಜತೆಗೆ ರೈತರ ಕಷ್ಟ-ನಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಇರುವ ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿ ಹಾಗೂ ರೈತರ ಬಗ್ಗೆ ಅವರಿಗಿರುವ ಕಾಳಜಿ ಇತರರಿಗೆ ಆದರ್ಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿದ್ದರಂಗಸ್ವಾಮಿ, ರೈತ ಸಂಘದ ಮುಖಂಡ ಥಾಮಸ್, ಯಾಳವಾರೆ ಕೇಶವಣ್ಣ, ನಗರಸಭೆ ಮಾಜಿ ಸದಸ್ಯ ಲೋಕೇಶ್, ನೌಕರ ಸಂಘದ ಮಾಜಿ ಅಧ್ಯಕ್ಷ ಸೋಮಶೇಖರ ಹಾಗೂ ನ್ಯಾಫೆಡ್ ಇಲಾಖೆ ಅಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.