ಹಾಸನ: ಸಕಲೇಶಪುರ ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ೧೪-೧೫ನೇ ಹಣಕಾಸು ಯೋಜನೆ, ಕಂದಾಯ ವಸೂಲಾತಿಗಳಲ್ಲಿ ಆಗಿರುವ ಹಣ ದುರುಪಯೋಗ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಬೇಕು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡುವಂತೆ ಬಾಗೆ ಗ್ರಾಮ ಪಂಚಾಯಿತಿ ಸದಸ್ಯ ಚಾರ್ಲ್ಸ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ೧೪ ಮತ್ತು ೧೫ನೇ ಹಣಕಾಸು ಯೋಜನೆಯಲ್ಲಿ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬರುವಂತಹ ಪರಿಹಾರದ ಹಣವನ್ನು ಪಿಡಿಒ ಅವರು ನಕಲಿ ದಾಖಲೆ ಸೃಷ್ಟಿಸಿ ಹಣ ಲಪಟಾಯಿಸಿದ್ದಾರೆ ಎಂದು ದೂರಿದರು.
ಎಸ್ಕ್ರೋ ಯೋಜನೆಯಡಿ ಮೀಸಲಿರಿಸಿದ್ದ ೯ ಲಕ್ಷ ರೂಪಾಯಿಗಳು ವಿದ್ಯುತ್ ಸರಬರಾಜು ಬಳಕೆಗೆ ಮಾತ್ರ ಅವಕಾಶವಿದ್ದು, ಈ ಹಣವನ್ನು ಹಾಸನದ ರಂಗನಾಥ ಎಲೆಕ್ಟ್ರಿಕಲ್ ಎಂಬ ಅಂಗಡಿಗೆ ವರ್ಗಾವಣೆ ಮಾಡಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದೇ ರೀತಿ ಗ್ರಾಮ ಪಂಚಾಯಿತಿಯಲ್ಲಿ ಅನೇಕ ಅವ್ಯವಹಾರಗಳನ್ನು ನಡೆಸಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಗ್ರಾಮ ಪಂಚಾಯತಿಯ ಲೆಕ್ಕ ಪರಿಶೋಧನೆ ಮಾಡಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಪುಸ್ತಕದಲ್ಲಿ ಇವರ ಲೋಪಗಳನ್ನು ಉಲ್ಲೇಖಿಸಿ ಬರೆದಿಟ್ಟು ಹೋಗಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಖುದ್ದು ಲೆಕ್ಕಪರಿಶೋಧಕರು ಕುರಿತು ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಹ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದು, ಮುಂದಿನ ದಿನಗಳಲ್ಲಿ ಪಿಡಿಒ ಚಿನ್ನಸ್ವಾಮಿ, ಕಾರ್ಯದರ್ಶಿ ಮೋನಪ್ಪ ವಿರುದ್ಧ ಹಾಗೂ ಗ್ರಾಮ ಪಂಚಾಯತಿಯಲ್ಲಿ ಆಗಿರುವ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವುದಾಗಿ ಮತ್ತು ಪ್ರತಿಭಟನೆ ನಡೆಸುವುದಾಗಿ ಚಾರ್ಲ್ಸ್ ಎಚ್ಚರಿಸಿದರು.