ಕೊಣನೂರು: ಇಲ್ಲಿನ ಬಸ್ ನಿಲ್ದಾಣದ ಸಮೀಪ, ಮುಖ್ಯ ರಸ್ತೆಯ ಎಸ್.ಎಲ್ ರಾಜು ಅವರ ಮನೆಯ ಮುಂದಿನ ತೆಂಗಿನ ಮರದ ಒಣಗಿದ ಗರಿ 11 ಕೆವಿ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಬುಧವಾರ ಬೆಳಿಗ್ಗೆ 6.30ರ ಸುಮಾರಿನಲ್ಲಿ ದಿಡೀರ್ ಬೆಂಕಿ ಹೊತ್ತಿ ಉರಿಯಿತು. ಕೂಡಲೇ ವಿದ್ಯುತ್ ಇಲಾಖೆಯವರಿಗೆ ವಿಷಯ ಮುಟ್ಟಿಸಿದಾಗ ಮರದ ಪಕ್ಕದಲ್ಲೇ ಹಾದು ಹೋಗಿದ್ದ ತಂತಿಯಿಂದ ಇಲಾಖೆಯವರು ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿದರು.
ತತ್‌ಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸದಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಒಣಗಿದ ಗರಿಗಳು ಉರಿದ ನಂತರ ಬೆಂಕಿ ಆರಿ ಹೋಯಿತು. ಬೆಂಕಿ ಹೊತ್ತಿಕೊಂಡ ಪರಿಣಾಮ ಮರದಲ್ಲಿನ ಕಾಯಿಗಳು ಕೆಳಗೆ ಉದುರಿದವು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.