ಹಾಸನ: ಚುನಾವಣಾ ಆಯೋಗವು ಮಾ .29ರಂದು ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯನ್ನು ಮೇ.10ರಂದು ನಡೆಸಲು ಘೋಷಣೆ ಮಾಡಿದ್ದು, ಅದರಂತೆ ಮೇ. 15ರವೆರೆಗೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ರಾಜಕೀಯ ಉದ್ದೇಶಕ್ಕಾಗಿ ಧಾರ್ಮಿಕ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿರುವ ಕುರಿತಂತೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣೆ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚಿಸಲು ನಿರ್ದೇಶಿಸಲಾಗಿರುತ್ತದೆ. ಸದರಿ ನಿಯಮಗಳ ಅನ್ವಯ ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಧಾರ್ಮಿಕ ಸಂಸ್ಥೆಗಳನ್ನು ದುರಪಯೋಗ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅರ್ಚನಾ ಎಂ.ಎಸ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಎ.ಬಿ.ಸಿ ವರ್ಗದ ಮುಜರಾಯಿ ಮತ್ತು ಖಾಸಗಿ ದೇವಾಲಯಗಳು ಹಾಗೂ ಚರ್ಚ್, ಮಸೀದಿ, ಇತರೆ ಎಲ್ಲಾ ಧಾರ್ಮಿಕ ಸಂಸ್ಥೆಗಳ ಅಧಿಕಾರಿಗಳು, ಮುಖ್ಯಸ್ಥರುಗಳು, ಸಿಬ್ಬಂದಿಗಳು ನಿಯಮಗಳನ್ನು ಪಾಳಿಸುವಂತೆ ಜಿಲ್ಲಾಧಿಕಾರಿವರು ತಿಳಿಸಿದ್ದಾರೆ. ಜಿಲ್ಲಾ ವ್ಯಾಪ್ತಿಯ ಎಲ್ಲಾ ಎ.ಬಿ.ಸಿ ವರ್ಗದ ಮುಜರಾಯಿ ಮತ್ತು ಮತ್ತು ಖಾಸಗಿ ದೇವಾಲಯಗಳು ಹಾಗೂ ಚರ್ಚ್, ಮಸೀದಿ, ಇತರೆ ಎಲ್ಲಾ ಧಾರ್ಮಿಕ ಸಂಸ್ಥೆಗಳು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ನೀಡಬೇಕು ಹಾಗೂ ಎ.ಬಿ.ಸಿ ವರ್ಗದ ಮುಜರಾಯಿ ಮತ್ತು ಖಾಸಗಿ ದೇವಾಲಯಗಳು ಹಾಗೂ ಚರ್ಚ್, ಮಸೀದಿ ಮತ್ತು ಇತರ ಧಾರ್ಮಿಕ ಸಂಸ್ಥೆಗಳಲ್ಲಿ ಜನ ಸಂದಣಿಯಾಗುವ ಮುಂಚಿತವಾಗಿಯೇ ಮಾಹಿತಿಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಒದಗಿಸುವಂತೆ ತಿಳಿಸಿದ್ದಾರೆ.
ಚುನಾವಣಾಧಿಕಾರಿಗಳು ಎಫ್.ಎಸ್.ಟಿ, ವಿ.ಎಸ್.ಟಿ ತಂಡವನ್ನು ತಮ್ಮ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳುಹಿಸಿ ಯಾವುದೇ ರಾಜಕೀಯ ವ್ಯಕ್ತಿ, ಮುಖಂಡರುಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆಯೇ, ಮಾತನಾಡಿದ್ದಾರೆಯೇ, ಪಾಯೋಜನ ಮಾಡಿದ್ದಾರೆಯೇ ಎಂದು ಪರೀಶೀಲಿಸುವಂತೆ ಸೂಚಿಸಿದ್ದಾರೆ. ಯಾವುದೇ ಧಾರ್ಮಿಕ ಸಂಸ್ಥೆಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಬಾರದೆಂದು ಸ್ವಷ್ಟವಾಗಿ ತಿಳಿಸಿದ್ದಾರೆ.