ಹಾಸನ: ನಗರದಲ್ಲಿ ತರಾತುರಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಜೊತೆಯಲ್ಲಿ ರಸ್ತೆಗಳ ಮಧ್ಯೆ ನಿರ್ಮಿಸುತ್ತಿರುವ (ಹಂಪ್ಸ್) ರಸ್ತೆ ಉಬ್ಬುಗಳು ಹಲವರ ಪ್ರಾಣಕ್ಕೆ ಕಂಟಕವಾಗಿದೆ.
ಎಲ್ಲೆಂದರಲ್ಲಿ ರಸ್ತೆ ಮಧ್ಯೆ ಅವೈಜ್ಞಾನಿಕ ಉಬ್ಬುಗಳನ್ನು ನಿರ್ಮಾಣ ಮಾಡುತ್ತಿದ್ದು, ಅದರ ಅರಿವಿಲ್ಲದ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ನಗರದ ವಿವಿಧೆಡೆ ಈ ರಸ್ತೆಯ ಉಬ್ಬುಗಳಿಂದ ನೂರಕ್ಕೂ ಹೆಚ್ಚು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆನ್ನಲಾಗಿದೆ. ರಸ್ತೆಗಳ ನಿರ್ಮಾಣದ ಬಳಿಕ ಅಗತ್ಯ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕವನ್ನಾಗಲಿ, ರಸ್ತೆ ಉಬ್ಬುಗಳ ಮೇಲೆ ಬಿಳಿ ಪಟ್ಟಿ ಅಥವಾ ಸೂಚನಾ ಫಲಕವನ್ನು ಅಳವಡಿಸದೆ ಇರುವುದರಿಂದ ಅಪಘಾತಗಳು ಮರುಕಳಿಸುತ್ತಿವೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತರಾತುರಿಯಲ್ಲಿ ಕೂಡು ರಸ್ತೆಗಳ ಮಧ್ಯೆ ನಿರ್ಮಿಸುತ್ತಿರುವ ಉಬ್ಬುಗಳಿಗೆ ಸೂಚನಾ ಫಲಕ ಅಥವಾ ರಸ್ತೆ ಉಬ್ಬು ಜಾಗೃತಿಯನ್ನು ಅಳವಡಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.