ಚನ್ನರಾಯಪಟ್ಟಣ: ತಾಲ್ಲೂಕಿನ ಕಸಬಾ ಹೊಬಳಿ ದಿಂಡಗೂರು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸಾರ್ವಜನಿಕರು ಧರಣಿ ನಡೆಸಿದರು. ಧರಣಿಯನ್ನು ಉದ್ದೇಶಿಸಿ ಜೋಗಿಪುರ ನಂದನ್ ಮಾತನಾಡಿ, ಗ್ರಾಮ ಪಂಚಾಯಿತಿ ಬಾಗಿಲು ತೆರೆಯುವ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ, ಬೆಳಗ್ಗೆ 12 ಗಂಟೆಗೆ ಕಚೇರಿಗೆ ಆಗಮಿಸಿದ್ಧೇನೆ, ಸಂಜೆ 4 ಗಂಟೆಯಾದರು ಅಧಿಕಾರಿಗಳು ಸುಳಿದಿಲ್ಲ, ಇನ್ನೂ ಸಿಬ್ಬಂದಿಗಳು ಕಚೇರಿಯಲ್ಲಿ ಕುಳಿತ್ತಿಲ್ಲ ಎಂದು ಆಪಾದನೆ ಮಾಡಿದರು.
ಒಂದು ದಿವಸ ಈ ರೀತಿಯಾದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ ಆದರೆ ವಾರದಲ್ಲಿ ಮೂರು ದಿವಸ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದೆ. ಮೂರು ದಿವಸವೂ ಇದೇ ರೀತಿಯಾಗಿದೆ, ಈ ಬಗ್ಗೆ ದೂರವಾಣಿ ಮೂಲಕ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲಕುಮಾರ ಗಮನಕ್ಕೆ ತಂದರೂ, ಅವರು ತಾಲೂಕು ಪಂಚಾಯಿತಿಗೆ ಆಗಮಿಸಿ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎನ್ನುತ್ತಾರೆ ಎಂದರು.
ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಹಾಜರಾಗದೆ, ಬಾಗಿಲು ತೆರೆದು ಈ ರೀತಿ ಹೊರ ಹೋಗುವುದಾದರೆ ಗ್ರಾಮ ಪಂಚಾಯಿತಿಗೆ ಕಾರ್ಯಾಲಯ ಅಗತ್ಯವಿಲ್ಲ, ಇದನ್ನು ಸಂಪೂರ್ಣ ಬಾಗಿಲು ಹಾಕಿ, ತಾಲೂಕು ಪಂಚಾಯಿತಿಯಲ್ಲಿ ಎಲ್ಲಾ ಕೆಲಸ ಮಾಡಲಿ ಎಂದರು, ಮೇಲಾಧಿಕಾರಿಗಳ ನಿರ್ಲಕ್ಷದಿಂದ ದಿಂಡಗೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಕಚೇರಿಗೆ ಆಗಮಿಸುತ್ತಿಲ್ಲ ಎಂದು ದೂರಿದರು.
ತಾಲೂಕು ಪಂಚಾಯಿತಿ ಸಿಇಒ ಸುನೀಲ್ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳಿಂದ ಸರಿಯಾಗಿ ಕೆಲಸ ಮಾಡಿಸಲು ಸಾಧ್ಯವಾಗದೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಇಲ್ಲವೆ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು, ಬದಲಾಗಿ ಸಾರ್ವಜನಿಕರಿಗೆ ಉಡಾಫೆ ಉತ್ತರ ನೀಡುವುದು ಎಷ್ಟು ಸರಿ, ಸರ್ಕಾರ ವೇತನ ನೀಡುವುದು ಜನರ ಸಮಸ್ಯೆ ಬಗೆ ಹರಿಸಲೆಂದು ಆದರೆ ಇವರು ಜನರನ್ನು ಮನೆ ಕೆಲಸದವರ ರೀತಿ ಮಾತನಾಡಿಸುತ್ತಾರೆ ಎಂದು ಆಪಾದನೆ ಮಾಡಿದರು.
ಪಿಡಿಓ ರಾಮಸ್ವಾಮಿ ಕಚೇರಿಗೆ ಆಗಮಿಸಿಲ್ಲ ಆದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ ಇದನ್ನು ಗಮನಿಸಿದರೆ, ಪಿಡಿಒ ಎರಡ್ಮೂರು ದಿವಸದ ಸಹಿಯನ್ನು ಒಂದೇ ದಿವಸ ಮಾಡಿರುವುದು ಅನುಮಾನ ಕಾಡುತ್ತಿದೆ, ಇವರು ಜನರಿಗೆ ಸಿಗುತ್ತಿಲ್ಲ ದೂರವಾಣಿ ಕರೆ ಮಾಡಿದರೆ ಆಪ್ ಮಾಡಿಕೊಂಡಿದ್ದಾರೆ, ಇಂತಹ ಅಧಿಕಾರಿ ವಿರುದ್ದ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಚೇರಿಯಲ್ಲಿ ನೀರುಘಟಿ, ಡಿ.ಗ್ರೂಪ್ ನೌಕರರು ಕುಳಿತುಕೊಂಡು ಕಚೇರಿಗೆ ಆಗಮಿಸುವ ಜನರ ಸಮಸ್ಯೆ ಆಲಿಸುವ ಸೌಜನ್ಯವನ್ನು ಬೆಳೆಸಿಕೊಂಡಿಲ್ಲ, ಚನ್ನರಾಯಟಪಟ್ಟಣ ನಗರಕ್ಕೆ ಕೇವಲ ಎರಡು ಕೀ.ಮಿ ಸಮೀಪದಲ್ಲಿ ದಿಂಡಗೂರು ಗ್ರಾಮ ಪಂಚಾಯಿತಿ ಇದೆ, ಇಂತಹ ಗ್ರಾ.ಪಂ.ಗಳ ಗತಿ ಈ ರೀತಿಯಾದರೆ ಇನ್ನೂ ಗಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಮಸ್ಯೆ ಎಷ್ಟು ಇದೆ ಎನ್ನುವುದನ್ನು ಜಿಲ್ಲಾಧಿಕಾರಿಗಳು ಅರಿಯಬೇಕು ಎಂದು ಆಗ್ರಹಿಸಿದರು.
ಕಚೇರಿಗೆ ಆಗಮಿಸಿದ್ದ ಮತ್ತೊಬ್ಬ ಆರ್‌ಟಿಐ ಕಾರ್ಯಕರ್ತ ಚೇತನ್ ಮಾತನಾಡಿ, 15ನೇ ಹಣಕಾಸಿನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ್ದೇನೆ ಕಳೆದ ಒಂದು ತಿಂಗಳಿನಿಂದ ಮಾಹಿತಿ ನೀಡುತ್ತಿಲ್ಲ, ತಾಲೂಕು ಪಂಚಾಯಿತಿ ಸಿಇಒ ಸುನೀಲಕುಮಾರ ಭೇಟಿ ಮಾಡಿದರೆ ಗ್ರಾಮ ಪಂಚಾಯಿತಿ ಅಡಳಿತ ಮಂಡಳಿ ಮತ್ತು ಸುಪ್ರೀಂ ಇದಕ್ಕೂ ನನಗೂ ಸಂಬಂದವಿಲ್ಲ ಎನ್ನುತ್ತಾರೆ ಎಂದು ಅಪಾದನೆ ಮಾಡಿದರು.
ಜೋಗಿಪುರ ಮಂಜೇಗೌಡ ಮಾತನಾಡಿ, ಸ್ವಚ್ಚ ಭಾರತ್ ವಿಷನ್ ಮೂಲಕ ಮೂರು ಲಕ್ಷ ರೂ. ವೆಚ್ಚ ಮಾಡಿ ಕಸ ಸಂಗ್ರಹ ಮಾಡಲು ಆಟೋ ಖರೀದಿಸಲಾಗಿದೆ, ಒಂದು ದಿವಸವೂ ರಸ್ತೆಯಲ್ಲಿ ಆಟೋ ಸಂಚಾರ ಮಾಡಿಲ್ಲ ಸರ್ಕಾರದ ಹಣ ನೀರು ಪಾಲು ಮಾಡಲಾಗುತ್ತಿದೆ, ಅಧಿಕಾರಿಗಳ ನಿರ್ಲಕ್ಷಕ್ಕೆ ಜನರ ಹಣ ಮಣ್ಣು ಪಾಲು ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.