ಬೇಲೂರು: ಬೇಲೂರು ಪುರಸಭಾ ವಾಣಿಜ್ಯ ಮಳಿಗೆಗಳಲ್ಲಿ ಕೋಟ್ಯಂತರ ಬಾಡಿಗೆ ಬಾಕಿದೆ. ಪುರಸಭೆ ಆಡಳಿತ ಬಡವರ ಮೇಲೆ ದರ್ಪ ಪ್ರದರ್ಶಿಸುವ ಮೊದಲು ಪ್ರಭಾವಿಗಳ ಕಪಿಮುಷ್ಠಿಯಲ್ಲಿರುವ ಕೋಟ್ಯಂತರ ರೂ. ಗಳ ಬಾಡಿಗೆಯನ್ನು ಕಾನೂನು ಪ್ರಕಾರ ವಸೂಲಿ ಮಾಡಬೇಕು ಎಂದು ಪುರಸಭಾ ಸದಸ್ಯ ಜಿ. ಶಾಂತಕುಮಾರ್ ಮತ್ತು ನಾಮಿನಿ ಸದಸ್ಯ ಪೈಂಟ್ ರವಿ ಒತ್ತಾಯಿಸಿದರು.
ಪಟ್ಟಣದ ಪುರಸಭಾ ವೇಲಾಪುರಿ ಸಭಾಂಗಣದಲ್ಲಿ ತೀರ್ಥಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ದಿನನಿತ್ಯ ಬದುಕಿಗಾಗಿ ಹೋರಾಟ ನಡೆಸುವ ಅಂಗಡಿಯ ಮೇಲೆ ಪುರಸಭೆ ಆಡಳಿತ ಬಾಡಿಗೆ ಕಟ್ಟುವಂತೆ ದರ್ಪ ತೋರಿಸುತ್ತಾರೆ. ಅದರೆ ಪಟ್ಟಣದ ನೌಕರರ ಭವನ, ಮುಖ್ಯರಸ್ತೆ ಬಹುತೇಕ ಮಳಿಗೆಗಳಲ್ಲಿ ಇಲ್ಲಿಯವರೆಗೆ ಬಾಡಿಗೆ ಬಾಕಿ ವಸೂಲಿಯಾಗಿಲ್ಲ ಎಂದು ಹೇಳಿದರು.
ಸದಸ್ಯ ಬಿ. ಗಿರೀಶ ಮಾತನಾಡಿ, ಪುರಸಭಾ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ನೀಡಲು ರಾಯಪುರ ಗ್ರಾಮದ ಬಳಿ ಸರ್ವೆ ನಂ. ೧೯ರಲ್ಲಿ ೫ ಎಕರೆ ಮೀಸಲು ಮಾಡಿದೆ. ಆದರೆ ಇದೇ ಭೂಮಿಗೆ ಬಗರ್ ಹುಕ್ಕಂನಲ್ಲಿ ಸಾಗುವಳಿ ಚೀಟಿ ನೀಡಿದ್ದಾರೆ. ಮುಂದಿನ ದಿನ ನ್ಯಾಯಾಲಯಕ್ಕೆ ಹೊಗುವ ಕಾರಣದಿಂದ ಪುರಸಭೆ ತಕ್ಷಣವೇ ರಾಯಪುರ ಬಳಿ ಭೂಮಿ ಪಕ್ಕ ದಾಖಲಾತಿ ಪಡೆದುಕೊಳ್ಳಬೇಕಿದೆ ಎಂದ ಅವರು ಪಟ್ಟಣದ ಜನತೆಗೆ ಕಳೆದ ೧೦ ವರ್ಷದಿಂದ ನಿವೇಶನ ನೀಡಿಲ್ಲ. ಈಗಲಾದರೂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಸದಸ್ಯ ಜಮಾಲ್ಲುದ್ದೀನ್ ಮಾತನಾಡಿ, ಪಟ್ಟಣದ ೨೩ ವಾರ್ಡ್‌ನಲ್ಲಿ ಬೀದಿ ನಾಯಿಗಳ ಕಾಟದಿಂದ ಸಾರ್ವಜನಿಕರ ಸಂಚಾರ ಕಷ್ಟವಾಗಿದೆ. ಈ ಬಗ್ಗೆ ಪುರಸಭೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಪುರಸಭೆಯಿಂದ ಖರೀದಿಸಿದ ಬಹುತೇಕ ವಾಹನಗಳು ರಿಪೇರಿ ಇಲ್ಲದೆ ಗುಜರಿ ಸೇರುತ್ತಿದೆ. ಪುರಸಭೆಗೆ ವಾಹನ ಖರೀದಿ ಸಂದರ್ಭದಲ್ಲಿ ವೈಜ್ಞಾನಿಕ ಅಂಶಗಳನ್ನು ಗಮನ ಹರಿಸಬೇಕಿದೆ. ಮುಂದೆ ಬರುವ ಬೇಲೂರು ರಥೋತ್ಸವ ಯಶಸ್ವಿಗೆ ಪುರಸಭೆ ವಿಶೇಷ ಆಸಕ್ತಿ ವಹಿಸಬೇಕು ಎಂದರು.
ಸದಸ್ಯರಾದ ಜಗದೀಶ ಮತ್ತು ಶ್ರೀನಿವಾಸ ಮಾತನಾಡಿ, ಪಟ್ಟಣದಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಶೆಡ್ ಅಂಗಡಿಗಳ ಸ್ಥಾಪನೆಗೆ ಕೆಲವರು ಕಮಿಷನ್ ಪಡೆಯುವ ಬಗ್ಗೆ ಮಾಹಿತಿ ಬಂದಿದೆ ಎಂದರು.
ಸದಸ್ಯ ಅಶೋಕ ಮಾತನಾಡಿ, ದೇಗುಲ ಹಿಂಭಾಗದ ಸಂತೆ ಸ್ಥಳಾಂತರ ಮಾಡಬೇಕು ಎಂದು ಪಟ್ಟು ಹಿಡಿದರೂ ಪುರಸಭೆ ಮುಖ್ಯಾಧಿಕಾರಿ ಗಮನ ಹರಿಸುತ್ತಿಲ್ಲ, ಈ ಬಗ್ಗೆ ಶೀಘ್ರವೇ ಕ್ರಮ ವಹಿಸಬೇಕು ಇಲ್ಲವಾದರೆ ಪುರಸಭೆ ಮುಂದೆ ಧರಣಿ ನಡೆಸಲಾಯಿತು ಎಂದು ಎಚ್ಚರಿಕೆ ನೀಡಿದರು.
ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ತೀರ್ಥಕುಮಾರಿ, ಉಪಾಧ್ಯಕ್ಷೆ ಉಷಾ ಸತೀಶ, ಮುಖ್ಯಾಧಿಕಾರಿ ಸುಜಯ್ ಕುಮಾರ್ ಹಾಜರಿದ್ದರು.