ಬೇಲೂರು: ಮುತ್ತುಗನ್ನೆ ಗ್ರಾಮದಲ್ಲಿ ಸರ್ವೆ ನಂಬರ್ ೭ ರಲ್ಲಿ ಇರುವ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿಕೊಂಡು ಜಾಗವನ್ನು ಕಬಳಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮುತ್ತುಗನ್ನೆ ಗ್ರಾಮದ ನಿವಾಸಿಯಾದ ಸಿದ್ದಯ್ಯನವರ ಮಗ ಬಸವರಾಜ ಎಂಬುವವರಿಗೆ ಸರ್ವೆ ನಂಬರ್ ೭ರಲ್ಲಿ ೨೨ ಗುಂಟೆ ಜಾಗವಿದ್ದು, ಆ ಜಾಗವನ್ನು ಬೆಣ್ಣೂರು ಗ್ರಾಮದ ಚಂದ್ರಶೇಖರ ಎಂಬ ವ್ಯಕ್ತಿಯು ತನ್ನ ಅಣ್ಣನ ಜಮೀನಿನಲ್ಲಿ ಬೆಳೆಯನ್ನು ಮಾಡಿಕೊಂಡು ಪಕ್ಕದಲ್ಲಿದ್ದ ಜಮೀನನ್ನು ಒತ್ತುವರಿ ಮಾಡಿಕೊಂಡು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಇದೇ ವೇಳೆ ಬಸವರಾಜ್ ಹಾಗೂ ಪತ್ನಿ ಜಯಮ್ಮ ಮಾತನಾಡಿ ನಮಗೆ ಇದು ಪಿತ್ರಾರ್ಜಿತ ಆಸ್ತಿಯಾಗಿದ್ದು ನಮ್ಮ ತಂದೆಯವರಾದ ರಾಮಯ್ಯ, ದ್ಯಾವಯ್ಯ ಅವರ ಹೆಸರಿನಲ್ಲಿದ್ದು, ಅವರ ಮರಣ ನಂತರ ಈ ಜಾಗವು ನಮ್ಮ ಹೆಸರಿನಲ್ಲಿದ್ದು ಇದಕ್ಕೆ ಎಲ್ಲಾ ದಾಖಲೆ ಪತ್ರಗಳು ಹಾಗೂ ಜಮೀನಿನ ಹಕ್ಕುಪತ್ರ ಇದ್ದರೂ ಸಹ ನಮ್ಮ ಊರಿನವರಲ್ಲದ ವ್ಯಕ್ತಿಯೊಬ್ಬರು ಈ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಮ್ಮವರ ಮೇಲೆ ದೌರ್ಜನ್ಯ ಮಾಡುವುದರ ಜೊತೆಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಜಾಗವನ್ನು ನಮಗೆ ಗುರುತು ಮಾಡಿ ಕೊಡದಿದ್ದರೆ ತಾಲೂಕು ಕಚೇರಿ ಮುಂಭಾಗದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ನಂಗರ ಅವರ ಪುತ್ರ ಯೋಗೇಶ್ ಮಾತನಾಡಿ, ನಮ್ಮ ಅಜ್ಜ ಅಜ್ಜಿ ಕಾಲದಿಂದಲೂ ಈ ಜಮೀನನ್ನು ಉಳಿಮೆ ಮಾಡಿಕೊಂಡು ಕೋವಿಡ್ ಸಂದರ್ಭದಲ್ಲಿ, ನೀರಿಲ್ಲದ ಹಿನ್ನಲೆಯಲ್ಲಿ ಚಂದ್ರಶೇಖರ ಎಂಬುವವರ ಅಣ್ಣ ಜಾವಯ್ಯ ಎಂಬುವವರು ಶುಂಠಿ ಹಾಕಲು ನಮ್ಮ ಬಳಿ ಜಮೀನನ್ನು ಪಡೆದುಕೊಂಡಿದ್ದರು. ಆದಾದ ನಂತರ ನಮ್ಮ ಜಮೀನನ್ನು ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಚಂದ್ರಶೇಖರ ಎಂಬುವವರು ಕೆಲ ಗುಂಡಾಗಳನ್ನು ಕರೆದುಕೊಂಡು ಬಂದು ನಾವು ದನಕರುಗಳಿಗೆ ಹಾಕಿದ್ದ ಶೆಡ್ ಕಿತ್ತು ಹಾಕಿದ್ದಲ್ಲದೆ ನಮ್ಮ ತಂದೆ ತಾಯಿ ಮೇಲೆ ಹಲ್ಲೆನಡೆಸಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದೇ ರೀತಿ ನಮ್ಮ ಪಿತ್ರಾರ್ಜಿತ ಆಸ್ತಿಯ ಸಂಪೂರ್ಣ ದಾಖಲಾತಿಗಳು ಪಾಣಿ, ಹಕ್ಕುಪತ್ರ ಎಲ್ಲಾ ಇದ್ದು ನಮ್ಮ ಜಾಗ ಪೋಡಿಗೆ ಅರ್ಜಿ ಹಾಕಿದ್ದೇವೆ. ನಮ್ಮ ಜಮೀನಿನ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ನಮಗೆ ತೊಂದರೆ ಕೊಡುವ ಉದ್ದೇಶದಿಂದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅಲ್ಲಿ ನಮಗೆ ನಮ್ಮ ಪರ ನ್ಯಾಯ ಬಂದ ಹಿನ್ನೆಲೆಯಲ್ಲಿ ನಮಗೆ ತೊಂದರೆ ಕೊಡುವ ಉದ್ದೇಶದಿಂದ ನನ್ನ ತಂಗಿ, ತಮ್ಮ, ತಂದೆ, ತಾಯಿಯರು ಕೆಲಸ ಮಾಡುವ ಸಂದರ್ಭದಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಮ್ಮ ದಾಖಲೆ ಪರಿಶೀಲಿಸಿ ನಮಗೆ ನ್ಯಾಯ ದೊರಕಿಸಿ ಕೊಡಿ. ಇವರ ದೌರ್ಜನ್ಯದಿಂದ ನಾವುಗಳು ವಿಷ ಕುಡಿಯುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ತಮ್ಮ ಜಮೀನನಲ್ಲೇ ಕೂತು ಕಣ್ಣೀರು ಹಾಕುತ್ತಿದ್ದಿದ್ದು ಮನ ಕುಲುಕುವಂತಿತ್ತು.