ಬೇಲೂರು: ನಗರದ 8ನೇ ವಾರ್ಡ್, ಪುರಸಭೆ ವ್ಯಾಪ್ತಿಯಲ್ಲಿ ಬರುವ ಚನ್ನ ಕೇಶವ ನಗರದ ಮೂಲಭೂತ ಸಮಸ್ಯೆಗಳ ಬಗ್ಗೆ ಹಾಲಿ ಅದ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ರವರಿಗೆ ಅಲ್ಲಿನ ನಿವಾಸಿಗಳು ಸಮಸ್ಯೆಗಳ ಸುರಿಮಳೆ ಗೈದರು.
ಕಳೆದ ಭಾರಿ ಚುನಾವಣೆ ಸಂದರ್ಭದಲ್ಲಿ 8ನೇ ವಾರ್ಡ್ ನ ಚನ್ನಕೇಶವ ನಗರ ಬಡಾವಣೆಗೆ ಅಂದಾಜು 2 ಕೋಟಿ ಮೊತ್ತದಲ್ಲಿ ಯುಜಿಡಿ, ಚರಂಡಿ ಅಭಿವೃದ್ಧಿ, ರಸ್ತೆ, ಇನ್ನಿತರ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಮಾಜಿ ಅದ್ಯಕ್ಷ ಸಿ.ಎನ್ ದಾನಿ ಪೊಳ್ಳು ಭರವಸೆಗಳನ್ನು ನೀಡಿದ್ದರು. ಆದರೆ ನಮ್ಮ ಕನಸುಗಳಿಗೆ ತಣ್ಣೀರೆರಚಿದ್ದಾರೆ. ನಾನು ಗೆದ್ದು ಕೇವಲ 15 ದಿನಗಳಲ್ಲಿಯೆ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆಂದು ಹೇಳಿ, ಆದರೆ ಪುರಸಭೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದರೂ ಯಾವುದೆ ಮೂಲಭೂತ ಸೌಕರ್ಯಗಳ ಬಗ್ಗೆ ಇಲ್ಲಿನ ಪುರಸಭೆ ಸದಸ್ಯ, ಮಾಜಿ ಅದ್ಯಕ್ಷ ಸಿ.ಎನ್.ದಾನಿ ತಲೆಕೆಡಿಸಿಕೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಭರವಸೆಗಳನ್ನು ನೀಡಿ, ಚುನಾವಣೆ ಕಳೆದು ಒಂದುವರೆ ವರ್ಷ ಕಳೆದರೂ ಇತ್ತ ಒಂದು ದಿನವಾದರೂ ವಾರ್ಡ್ ಕಡೆ ತಲೆ ಹಾಕಿಲ್ಲ. ಚನ್ನಕೇಶವ ಬಡಾವಣೆಯಲ್ಲಿ ಸುಮಾರು 300 ಕುಟುಂಬಗಳು ವಾಸವಾಗಿದ್ದು, ಬಡಾವಣೆಗೆ ಹೋಗಲು ಸೂಕ್ತ ರಸ್ತೆ, ಚರಂಡಿಗಳಿಲ್ಲ ಎಂದು ನಿವಾಸಿಗಳು ಪುರಸಭೆ ಅಧ್ಯಕ್ಷರ ಬಳಿ ಹತ್ತಾರು ಸಮಸ್ಯೆಗಳನ್ನು ಹೇಳಿಕೊಂಡು ದಾನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬಡಾವಣೆಯಲ್ಲಿ ಕಸ ವಿಲೆವಾರಿ ಮಾಡಲು ಪುರಸಭೆ ವಾಹನ ಬರುವುದಿಲ್ಲ. ಬಡಾವಣೆ ಕಸದ ಕೊಂಪೆಯಾಗಿದೆ. ನಿವಾಸಿಗಳ ಮನೆಗೆ ಹಕ್ಕು ಪತ್ರ ಕೊಡಿಸುವಂತೆ ಹಲವಾರು ಭಾರಿ ಮನವಿ ಮಾಡಿದ್ದೇವೆ. ಆದರೆ ದಾನಿಯವರು ನಿವಾಸಿಗಳಿಗೆ ಹಕ್ಕು ಪತ್ರ ನೀಡಿದ್ದೇವೆ ಎಂದು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಸದಸ್ಯರ ವಿರುದ್ದ ಕಿಡಿ ಕಾರಿದರು.
ಸ್ಥಳಕ್ಕೆ ಬೇಟಿ ನೀಡಿದ ಹಾಲಿ ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ ವೆಂಕಟೇಶ ಸ್ಥಳಿಯರ ಕುಂದು ಕೊರತೆಗಳನ್ನು ಆಲಿಸಿ, ಕೆಲ ವರ್ಷದಿಂದ ಓವರ್ ಟ್ಯಾಂಕ್ ಸ್ವಚ್ಛಗೊಳಿಸದೆ ನೀರು ಕಲುಷಿತಗೊಂಡು ಹುಳುಗಳು ವಾಸ ಮಾಡಲು ಪ್ರಾರಂಭ ಮಾಡಿದ್ದವು. ತಕ್ಷಣ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಗಳೊಂದಿಗೆ ಕುಡಿಯುವ ನೀರಿನ ಓವರ್ ಟ್ಯಾಂಕ್ ಸ್ವಚ್ಛಗೊಳಿಸಿ, ನಿವಾಸಿಗಳಿಗೆ ಕುಡಿಯುವ ನೀರಿನ ಬವಣೆ ನಿವಾರಿಸಿದರು. ಪ್ರತಿದಿನ ವಾಹನ ಮೂಲಕ ಕಸ ವಿಲೆವಾರಿ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹಿರಿಯ ಆರೋಗ್ಯಾಧಿಕಾರಿ ಜ್ಯೋತಿ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ, ಸ್ಥಳಿಯರಾದ ನಾಮಿನಿ ಸದಸ್ಯ ಪೈಂಟ್ ರವಿ, ಎಂ.ಜಿ.ನಿಂಗರಾಜು, ಗೀತಾ, ನೇತ್ರಾ, ಚಂದ್ರಮ್ಮ, ಪದ್ಮ, ಮಾಲಾ, ತೇಜಾ, ಮೀನಾಕ್ಷಿ, ಜಯಂತಿ, ಲೀಲಾ, ನಾಗೇಂದ್ರ, ಸಿದ್ದೇಶ್, ಮುರಳಿ, ಮೀನು ಮಂಜು, ಆರ್.ಕೆ. ರಾಜು, ಸುರೇಶ್, ನಾಗ, ಮತ್ತಿತರರು ಇದ್ದರು.