ಹಾಸನ: ಕಳೆದ ರಾತ್ರಿ ಜಿಲ್ಲೆ ಸೇರಿದಂತೆ ಹಾಸನ ನಗರದ ಸುತ್ತಮುತ್ತ ವ್ಯಾಪಕ ಮಳೆಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ನಗರದ ದೇವೇಗೌಡ ನಗರದಲ್ಲಿ ವಿಪರಿತ ಗಾಳಿ-ಮಳೆಯ ಕಾರಣ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ನಿನ್ನೆ ರಾತ್ರಿ 8:30 ರಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ಜನರು ಪರದಾಡುವಂತೆ ಆಗಿದೆ. ಇದುವರೆಗೂ ದೇವೇಗೌಡ ನಗರದಲ್ಲಿ ವಿದ್ಯುತ್ ಸಂಪರ್ಕ ದ ದುರಸ್ತಿ ಪೂರ್ಣವಾಗಿಲ್ಲ. ಇಲ್ಲಿನ 5ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.
ಇಲ್ಲಿನ ಅಲ್ತಾಫ್ ಎಂಬುವರ ಮನೆ ಸಂಪೂರ್ಣ ಹಾನಿಯಾಗಿದ್ದು, ಛಾವಣಿ ಕುಸಿದು ಹೋಗಿದೆ ಕಳೆದ 20 ವರ್ಷಗಳಲ್ಲಿಯೇ ಕಾಣದಂತ ಗಾಳಿಯೊಂದಿಗೆ ಬಂದಂತಹ ಮಳೆಯ ಕಾರಣ ಛಾವಣಿ ಹಾನಿಯಾಗಿ ಅಲ್ತಾಫ್ ಅವರ ತಂಗಿಯ ಮದುವೆಯ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಬಟ್ಟೆ ಹಾಗೂ ಇತರೆ ವಸ್ತುಗಳು ಸಂಪೂರ್ಣ ಹಾನಿಗೀಡಾಗಿದೆ. ಜೂನ್ 4 ರಂದು ಅವರ ತಂಗಿಯ ಮದುವೆ ಸಂಬಂಧ ಹೊಸ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ಪಕ್ಕದ ಮನೆ ನಂಜಮ್ಮ ಅವರ ಮನೆಯೂ ಸಹ ಸಂಪೂರ್ಣ ಹಾನಿಯಾಗಿದ್ದು, ವಿಪರೀತ ಗಾಳಿಗೆ ಇಡೀ ಮನೆಯ ಮೇಲ್ಚಾವಣಿ ಪಕ್ಕದ ರಸ್ತೆವರೆಗೂ ಹಾರಿ ಹೋಗಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬವು ಮುರಿದುಹೋಗಿದೆ.
ಇದೇ ದೇವೇಗೌಡ ನಗರದ ಮನೆಯ ಮುಂದೆ ನಿಲ್ಲಿಸಲಾಗಿದ್ದ ಮೋಹನ್ ಅವರ ಆಕ್ಟಿವ್ ಹೋಂಡಾ ಮೇಲೆ ಲೈಟ್ ಕಂಬ ಬಿದ್ದು ಹಾನಿ ಉಂಟಾಗಿದ್ದು, ಇದುವರೆಗೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪರಿಶೀಲನೆ ನಡೆಸಿ ಪರಿಹಾರದ ಕುರಿತು ಕ್ರಮಗಳನ್ನು ಕೈಗೊಂಡಿಲ್ಲ ಎಂದು ಇಲ್ಲಿನ ನಾಗರಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮದ್ಯಾಹ್ನ 12 ಗಂಟೆಯಿಂದ ವಿದ್ಯುತ್ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಸಂಜೆಯ ವೇಳೆಗೆ ವಿದ್ಯುತ್ ಸಂಪರ್ಕ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಸನ ನಗರದ ಹಲವು ಬಡಾವಣೆಗಳಲ್ಲಿ ಮರಗಳ ರಂಭೆಗಳು ಮುರಿದು ಬಿದ್ದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾತ್ರಿ ಎಂಟು ಮೂವತ್ತಕ್ಕೆ ಶುರುವಾದ ಮಳೆ ಒಂದುವರೆ ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಸುರಿದಿದೆ. ಜಿಲ್ಲೆಯ ಸಕಲೇಶಪುರ, ಆಲೂರು, ಚನ್ನರಾಯಪಟ್ಟಣ, ಬೇಲೂರು ಸೇರಿದಂತೆ ಇತರೆ ತಾಲೂಕಿನಲ್ಲಿ ವ್ಯಾಪಕ ಮಳೆ ಸುರಿದಿದೆ.