ಹಾಸನ: ಶ್ರೀ ಚನ್ನಕೇಶವ ಸ್ವಾಮಿ ವಿದ್ಯಾಸಂಸ್ಥೆ ಅಡಿಯಲ್ಲಿ ಬೂವನಹಳ್ಳಿಯಲ್ಲಿ ಪ್ರಾರಂಭಿಸಿರುವ ಸಿಕೆಎಸ್ ಆಂಗ್ಲ ಮಾಧ್ಯಮದ ಆಡಳಿತ ಮಂಡಳಿ ಸುಳ್ಳು ದಾಖಲೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಶಾಲೆ ಪ್ರಾರಂಭಕ್ಕೆ ನೀಡಿರುವ ಮಂಜೂರಾತಿ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರದ್ದುಪಡಿಸಿದೆ ಎಂದು ಕುವೆಂಪು ಪಿಯು ಕಾಲೇಜಿನ ಕಾರ್ಯದರ್ಶಿ ಬಿ.ಇ ಶಿವರಾಮೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೨-೨೦೨೩ನೇ ಸಾಲಿನಿಂದ ೧ರಿಂದ ೮ನೇ ತರಗತಿಯನ್ನು ಪ್ರಾರಂಭಿಸಲು ಸಿಕೆಎಸ್ ಶಾಲೆಯ ಆಡಳಿತದವರು ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದು ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ. ಬೂವನಹಳ್ಳಿ ಗ್ರಾಮದ ಜಮೀನಿನ ನಕ್ಷೆಯಲ್ಲಿ ಇರುವಂತೆ ಶಾಲೆ ಕಟ್ಟಡವನ್ನು ಸರ್ವೆ ನಂಬರ್ ೧೦೭/೧೨ರಲ್ಲಿ ನಿರ್ಮಾಣ ಮಾಡುವ ಬದಲಿಗೆ ಭುವನಹಳ್ಳಿ ಗ್ರಾಮದ ಸರ್ವೆ ನಂಬರ್ ೧೨೮ರಲ್ಲಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಅಲ್ಲದೆ, ಈ ಜಾಗವು ಶ್ರೀ ಚನ್ನಕೇಶವ ದೇವರ ಆಸ್ತಿಯಾಗಿದ್ದು, ಈ ಬಗ್ಗೆ ಸ್ಥಳೀಯ ಪಂಚಾಯಿತಿ ಎರಡು ಮೂರು ಬಾರಿ ನೋಟಿಸ್ ನೀಡಿದ್ದರೂ ಕೂಡ ಕಟ್ಟಡ ನಿರ್ಮಾಣ ಮಾಡುವುದರೊಂದಿಗೆ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಆದ್ದರಿಂದ ಕರ್ನಾಟಕ ಶಿಕ್ಷಣ ಮಸೂದೆ ೧೯೮೩ರ ನಿಯಮ ೩೪ ಮತ್ತು ೩೯ರ ಅನ್ವಯ ಶಾಲೆ ತೆರೆಯಲು ೨೦೨೨ ಜೂನ್ ೧೫ರಂದು ನೀಡಿದ್ದ ಅನುಮತಿಯನ್ನು ಹಿಂಪಡೆದು ಸದರಿ ಶಾಲೆಯ ಮಾನ್ಯತೆಯನ್ನು ಮತ್ತು ನೋಂದಣಿಯನ್ನು ರದ್ದುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ ಇದು ಶೈಕ್ಷಣಿಕ ವರ್ಷದ ಅಂತಿಮ ಭಾಗವಾಗಿರುವುದರಿಂದ ಈ ಶೈಕ್ಷಣಿಕ ವರ್ಷದ ಅವಧಿ ಮುಗಿದ ತಕ್ಷಣವೇ ಈ ಶಾಲೆಯ ವಿದ್ಯಾರ್ಥಿಗಳನ್ನು ಹತ್ತಿರದ ಶಾಲೆಗೆ ದಾಖಲಿಸಲು ಕ್ರಮ ವಹಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ೨೦೨೩-೨೪ನೇ ಸಾಲಿನಿಂದ ಶಾಲೆಯನ್ನು ಪ್ರಾರಂಭಿಸಿದಂತೆ ತಿಳಿಸಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲೆ ಪ್ರಾರಂಭಕ್ಕೆ ನೀಡಿದ ಅನುಮತಿ ಪತ್ರದಲ್ಲಿ ಶಾಲೆಯನ್ನು ಮಂಜೂರು ಮಾಡಿರುವ ಸ್ಥಳದಲ್ಲಿ ಮಾತ್ರ ತೆರೆಯತಕ್ಕದ್ದು ಹಾಗೂ ಯಾವುದೇ ಕಾರಣಕ್ಕೂ ಸ್ಥಳ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಯಾವ ಆಡಳಿತ ಮಂಡಳಿಗೆ ಶಾಲೆ ನಡೆಸಲು ಅನುಮತಿ ನೀಡಲಾಗಿದೆಯೋ ಅದೇ ಮಂಡಳಿಯು ಅದೇ ಸ್ಥಳದಲ್ಲಿ ಮಾತ್ರ ಅದೇ ಹೆಸರಿನಲ್ಲಿ ನಡೆಸತಕ್ಕದ್ದು ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಆದರೆ ಇದನ್ನೆಲ್ಲಾ ಗಾಳಿಗೆ ತೂರಿರುವ ಶಾಲೆ ಮಾನ್ಯತೆಯನ್ನು ಕಳೆದುಕೊಂಡಿದೆ ಎಂದರು.
ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸುಳ್ಳು ದಾಖಲೆ ಒದಗಿಸಿರುವುದರಿಂದ ಆರ್‌ಟಿಇ ಕಾಯ್ದೆ ಅಡಿ ಕಾನೂನಾತ್ಮಕವಾಗಿ ದೂರು ದಾಖಲಿಸಿ ಅನಧಿಕೃತ ಶಾಲೆಗೆ ಇರುವಂತೆ ದಿನಕ್ಕೆ ೧೦ ಸಾವಿರ ರೂ.ಗಳ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಉಪ ನಿರ್ದೇಶಕರ ಮುಖೇನ ಸ್ಥಳೀಯ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.