ಹಾಸನ: ವಿಧಾನ ಸಭೆ ಸಾರ್ವತ್ರಿಕ ಚುನಾವಣೆಗೆ ನೀತಿ ಸಂಹಿತೆ ಜಾರಿಗಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್‌ಗಳಲ್ಲಿ ಸಮನ್ವಯದಿಂದ ಕೆಲಸ ಮಾಡುವ ಅಗತ್ಯ ಇದೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಪರಿಣಾಮಕಾರಿ ಅನುಷ್ಠಾನ ಕುರಿತು ಎಲ್ಲಾ ಕ್ಷೇತ್ರದ ಚುನಾವಣಾಧಿಕಾರಿಗಳು, ತಹಶೀಲ್ದಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಸಭೆ ನಡೆಸಿದ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಬ್ಬರೂ ಕೆಲಸ ಮಾಡಬೇಕು, ಪ್ರತಿದಿನ ಪಾಳಿವಾರು ಹಾಜರಾತಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು. ಎಫ್.ಎಸ್.ಟಿ ತಂಡಗಳು ಸಂಪೂರ್ಣವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ವರದಿ ನೀಡಬೇಕು. ನೀತಿ ಸಂಹಿತೆ ಸಂಪೂರ್ಣ ಜಾರಿಯಾಗಬೇಕು ಎಂದರು. ಬಾಕಿ ಇರುವ ನಮೂನೆಗಳನ್ನು ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಎಸ್ ಅರ್ಚನಾ ಸೂಚನೆ ನೀಡಿದರು.
ಎಲ್ಲಾ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಮತಗಟ್ಟೆ ಪರಿಶೀಲನೆ ಮಾಡಿ, ಎಲ್ಲಾ ಸುಸ್ಥಿತಿಯಲ್ಲಿ ಇರುವುದನ್ನು ಖಾತರಿ ಪಡಿಸಿಕೊಳ್ಳಿ. ದುರಸ್ತಿ ಕಾಮಾಗಾರಿ ಪ್ರಾರಂಭ ಮಾಡಿರುವ ಬಗ್ಗೆ ವರದಿ ನೀಡಿ ಎಂದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಮಾತನಾಡಿದರು.