ಹಾಸನ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನಾಮ ಪತ್ರ ಸ್ವೀಕಾರ ಪ್ರಕ್ರಿಯೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ, ಅಧಿಸೂಚನೆ ಹೊರಡಿಸುವುದು ಹಾಗೂ ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಇರುವ ಅವಕಾಶಗಳ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಎಂ.ಎಸ್ ಅರ್ಚನಾ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಎಲ್ಲಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಸಾರ್ವತ್ರಿಕ ಚುನಾವಣಾ ಸಿದ್ದತೆ ಕುರಿತಂತೆ ಸಲಹೆ ಸೂಚನೆಗಳನ್ನು ನೀಡಿದರು. ಅಂಚೆ ಮತದಾನಕ್ಕೆ ಎಲ್ಲಾ ರೀತಿ ಅಗತ್ಯ ಕ್ರಮವಹಿಸಿ ಕ್ಷೇತ್ರ ಪರಿಶೀಲನೆ ಮಾಡಿಕೊಂಡು ಬಾಕಿ ಇರುವ ಅರ್ಜಿಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಎಲ್ಲಾ ತಾಲೂಕುಗಳಲ್ಲಿ, ತಾಲೂಕು ಪಂಚಾಯತ್‌ಗಳಲ್ಲಿ ಲಭ್ಯ ಇರುವ ಕ್ಯಾಮೆರಾಗಳನ್ನು ಬಳಸಿ ಎಫ್.ಎಸ್.ಟಿ ಮತ್ತಿತರ ಮಾದರಿ ನೀತಿ ಸಂಹಿತೆ ನಿಗಾ ಸಮಿತಿಗಳಿಗೆ ಒದಗಿಸಿ ಅಗತ್ಯ ಇರುವ ಕಡೆ ಹೊಸ ಕ್ಯಾಮರಾ ಖರೀದಿಸಿ ಬಳಸಿ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.