ಹಾಸನ: ಹಾಸನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎರಡು ದಿನದಿಂದ ತೀವ್ರ ಪರಿಶೀಲನೆ ನಡೆಸಿದ್ದಾರೆ. ಜೆಡಿಎಸ್ ಪಕ್ಷದ ಹಿಡಿತದಲ್ಲಿರುವ ಬ್ಯಾಂಕ್ ಮೇಲೆ ನಡೆದಿರುವ ದಾಳಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮತ್ತು ಆತಂಕ ಮನೆ ಮಾಡಿದೆ.
ಇಂದು ಸಹ ಐಟಿ ಅಧಿಕಾರಿಗಳು ಬ್ಯಾಂಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಎರಡನೇ ದಿನವೂ ಕಡತಗಳ ಪರಿಶೀಲನೆ ಮುಂದುವರಿದಿದೆ. ಬ್ಯಾಂಕ್‌ಗೆ ಕಳೆದ ಎರಡು ದಿನಗಳಿಂದ ಬ್ಯಾಂಕ್ ನ ಕಡತಗಳನ್ನು ಎಲ್ಲಾ ಲಾಕರ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪ್ರತ್ಯೇಕ ಕಾರುಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳ ತಂಡ ಬ್ಯಾಂಕ್‌ನ ಎಲ್ಲಾ ಕಡತಗಳ ಪರಿಶೀಲನೆ ನಡೆಸುತ್ತಿದೆ. ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೂ ಖಾತೆ, ವಹಿವಾಟು ಸೇರಿದಂತೆ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಚುನಾವಣೆಯ ಹೊಸ್ತಿಲಲ್ಲೂ, ಅದರಲ್ಲೂ ಜೆಡಿಎಸ್ ಸಾರಥ್ಯ ಇರುವ ಬ್ಯಾಂಕ್‌ಗೆ ಈ ರೀತಿ ಐಟಿ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬ್ಯಾಂಕ್‌ನಲ್ಲಿ ಯಾರೆಲ್ಲ ಠೇವಣಿ ಇಟ್ಟಿದ್ದರು, ಬ್ಯಾಂಕ್‌ನಲ್ಲಿ ಗಣ್ಯ ವ್ಯಕ್ತಿಗಳ ಖಾತೆಯಲ್ಲಿನ ವ್ಯವಹಾರದ ವಿವರಗಳು, ಠೇವಣಿ ಹಿಂದೆಗೆತ ಮತ್ತಿತರ ವಿಚಾರಗಳನ್ನು ತಂಡ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.
ನಿರ್ದೇಶಕರೆಲ್ಲ ಜೆಡಿಎಸ್‌ನವರೇ…;!
೧೩ ನಿರ್ದೇಶಕರು ೩ ನಾಮಿನಿ ನಿರ್ದೇಶಕರು ಇದ್ದು ಎಲ್ಲರು ಜೆಡಿಎಸ್ ಪಕ್ಷದವರಾಗಿದ್ದು ವಿಧಾನ ಪರಿಷತ್ ಸದಸ್ಯ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಅವರು ಸಹ ಕಳೆದ ಬಾರಿಯ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು ೩೪ ಬ್ಯಾಂಕ್ ಉಪ ಶಾಖೆಗಳನ್ನು ಹೊಂದಿದ್ದು ಸುಮಾರು ೧೭೦೦ ಕೋಟಿ ವಹಿವಾಟಿ ನಡೆಸುತ್ತಿದೆ. ಸುಮಾರು ೩ ಲಕ್ಷ ಖಾತೆದಾರರು ಇದ್ದು, ಇವರಲ್ಲಿ ೧.೫ ಲಕ್ಷ ಮಂದಿ ಸಾಲವನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.