ಬೇಲೂರು: ತಾಲೂಕಿನ ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಗಾಂಧಾರ ಬುದ್ಧ ವಿಹಾರಕ್ಕೆ ಬರುವ ಪ್ರವಾಸಿಗರ ಮೂಲಭೂತ ಸಮಸ್ಯೆಗಳ ಅನುಕೂಲಕ್ಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ ಎಚ್. ಲಕ್ಷ್ಮಣ್ ತಮ್ಮ ವೈಯಕ್ತಿಕ 6 ಲಕ್ಷ ರೂ. ವೆಚ್ಚದ ಹೈಟೆಕ್ ಶೌಚಾಲಯ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಅಲ್ಪ ಅವಧಿಯಲ್ಲಿ ಉದಯವಾಗಿ ರಾಜ್ಯದ ಗಮನ ಸೆಳೆದಿರುವ ಗಾಂಧಾರ ಬುದ್ಧ ವಿಹಾರ ತಾಲೂಕಿನಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಪ್ರಸಿದ್ಧಿ ಪಡೆದಿರುವುದು ತಾಲೂಕಿನ ಗೌರವ ಹೆಚ್ಚಿಸಿದೆ. ಬುದ್ಧ ಬಸವ ಅಂಬೇಡ್ಕರ್ ರವರ ವಿಚಾರ ಧಾರೆಯೊಂದಿಗೆ ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಿರುವ ಕಾರ್ಯಕರ್ತರ ಉತ್ಸಾಹ ಇತರರಿಗೆ ಮಾದರಿಯಾಗಿದ್ದು ಅತ್ಯಂತ ಕಡಿಮೆ ಅವಧಿಯಲ್ಲೆ ದೂರದ ಪ್ರವಾಸಿಗರನ್ನು ಸೆಳೆಯುತ್ತಿರುವ ಬುದ್ಧ ವಿಹಾರವು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡುವ ಕಾಲ ದೂರವಿಲ್ಲ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ ತಾವು ಎಂದೆಂದಿಗೂ ಕೈಜೋಡಿಸುವುದಾಗಿ ತಿಳಿಸಿದರು.
ನಂತರ ಮಾತನಾಡಿದ ಗಾಂಧಾರ ಬುದ್ಧ ವಿಹಾರದ ಪ್ರಧಾನ ಕಾರ್ಯದರ್ಶಿ ವಕೀಲ ರಾಜು ಅರೇಹಳ್ಳಿ, ರಜೆ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಹಾರದ ವೀಕ್ಷಣೆಗಾಗಿ ನೂರಾರು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ಅವರಿಗೆ ಸರಿಯಾದ ಮೂಲಭೂತ ಸೌಲಭ್ಯಗಳ ಇಲ್ಲದೆ ತೊಂದರೆ ಆಗುತ್ತಿತ್ತು, ಇದೀಗ ಅನೇಕ ಹೃದಯವಂತ ದಾನಿಗಳಿಂದ ಸದ್ಯಕ್ಕೆ ಎಲ್ಲಾ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳು ಕಂಡುಬರುತ್ತವೆ ಕುಡಿಯುವ ನೀರು, ಹೈಟೆಕ್ ಶೌಚಾಲಯ, ದಮ್ಮಕುಟೀರ, ಸಿಮೆಂಟ್ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಳಂದ ಬುದ್ಧ ವಿಹಾರದ ಪೂಜ್ಯ ಬಿಕ್ಕು ದಮ್ಮತಿಸ ಬಂತೆಜಿ, ಪುರಸಭೆ ಮಾಜಿ ಅಧ್ಯಕ್ಷ ಸಿ. ಎನ್. ದಾನಿ, ಮದಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ದೊಡ್ಡಿಹಳ್ಳಿ ದಿನೇಶ ಹಾಗೂ ಸದಸ್ಯ ರೂಪೇಂದ್ರ, ವಕೀಲ ಕುಮಾರ್ ಗುಪ್ತ, ಧರ್ಮಯ್ಯ, ಮಂಜುನಾಥ, ಶಿವರಾಜು, ಚಂದ್ರು, ವಿರೂಪಾಕ್ಷ, ರಘು ಇತರರು ಹಾಜರಿದ್ದರು