ಜಾವಗಲ್: ಪ್ರಚಾರದ ಆಸೆ ಇಲ್ಲದೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡಿದ್ದೇನೆ ಎಂದು ಶಾಸಕ ಕೆ. ಎಸ್. ಲಿಂಗೇಶ್ ತಿಳಿಸಿದರು.
ಗ್ರಾಮದ ಜನತಾ ಬಡಾವಣೆಯಲ್ಲಿ ಅಂದಾಜು ೫೦ ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಮಂಗಳವಾರ ಶಾಸಕ ಕೆ. ಎಸ್. ಲಿಂಗೇಶ್ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಜಾವಗಲ್ ಹೋಬಳಿಗೆ ಇದುವರೆಗೂ ೩೨೦ ಕೋಟಿ ರೂಪಾಯಿಗಳ ಅನುದಾನವನ್ನು ತಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಈವರೆಗೂ ಬೇಲೂರು ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಯಾರೂ ಕೂಡ ಇಷ್ಟು ದೊಡ್ಡ ಮಟ್ಟದ ಅನುದಾನವನ್ನು ತಂದು ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ, ಮುಂದೆ ಮಾಡುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ನಾನು ರೈತನ ಮಗನಾಗಿರುವ ಕಾರಣ ಅವರ ಕಷ್ಟ ಸುಖಗಳನ್ನು ಅರಿತು ಕೆಲಸ ಕಾರ್ಯಗಳನ್ನು ಮಾಡಿದ್ದೇನೆಯೇ ಹೊರತು ಪ್ರಚಾರಕ್ಕಾಗಿ ಎಂದು ಆಸೆ ಪಟ್ಟವನಲ್ಲ ಹಾಗೂ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಮುಂಬರುವ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದು ಕೇಳುತ್ತೇನೆ ಎಂದು ತಿಳಿಸಿದರು.
ಸಹಾಯಕ ಇಂಜಿನಿಯರ್ ತೀರ್ಥಕುಮಾರ ಮಾತನಾಡಿದರು. ಗ್ರಾಪಂ ಲೆಕ್ಕ ಸಹಾಯಕ ರುದ್ರೇಶ, ಮಾಜಿ ಗ್ರಾಪಂ ಅಧ್ಯಕ್ಷೆ ಯಶೋದಮ್ಮ ಇನ್ನಿತರರು ಇದ್ದರು.