ಹಾಸನ: ಯಾವುದೇ ಒಂದು ವಿಧ್ಯೆ ಆಗಿರಲಿ, ತರಬೇತಿ ಆಗಿರಲಿ ಕಲಿಯಬೇಕೆಂಬ ಮನಸ್ಸು ಇದ್ದರೆ ಅದಕ್ಕೆ ಯಾವ ವಯಸ್ಸು ಅಡ್ಡಿ ಬರುವುದಿಲ್ಲ ಎಂಬುದಕ್ಕೆ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವವರೆ ಸಾಕ್ಷಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಶ್ಲಾಘನೆ ವ್ಯಕ್ತಪಡಿಸಿದರು.
ನಗರದ ಹೊಸಲೈನ್ ರಸ್ತೆ ಬಳಿ ಇರುವ ಜಿಲ್ಲಾ ಪೊಲೀಸ್ ವಸತಿ ಗೃಹದ ಬಳಿ ಇರುವ ಪೊಲೀಸ್ ಸಮುದಾಯ ಭವನದಲ್ಲಿ ಹಾಸನ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲಿಯಬೇಕು ಎನ್ನುವ ಹಂಬಲದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಬಂದಿರುವುದು ಸಂತೋಷ ತಂದಿದೆ. ಕಲಿತ ಕೆಲವೇ ದಿನಗಳಲ್ಲಿ ಪರಿಣಿತರಾಗಿ ನಾನು ಸೆಲ್ಯುಟ್ ಹೊಡೆಯುವುದಕ್ಕಿಂತ ಇನ್ನು ಉತ್ತಮವಾಗಿ ನಿಮ್ಮಿಂದ ಕಂಡು ಬಂದಿರುವುದು ನನಗೆ ಸಂತೋಷ ತಂದಿದೆ ಎಂದು ಶ್ಲಾಘಿಸಿದರು.
ಈ ಒಂದು ವಾರದ ದಿನಗಳಲ್ಲಿ ಇಷ್ಟೊಂದು ಶಿಸ್ತು, ಸೌಮ್ಯತೆ ಬದ್ಧತೆ ಬಂದಿದೆ. ನಾಗರೀಕ, ಬಂದೂಕು ತರಬೇತಿ ಶಿಬಿರದಲ್ಲಿ ಕೂಲಿ ಕಾರ್ಮಿಕರು, ವಕೀಲರು, ಸರಕಾರಿ ನೌಕರರು, ಮೀಡಿಯಾ, ವ್ಯಾಪಾರ ಮಾಡುವವರು, ನಿವಾಸಿಗಳು, ಇಂಜಿನಿಯರ್ ಸೇರಿದಂತೆ ಸಮಾಜದ ಎಲ್ಲಾ ವರ್ಗದ, ಕೆಲಸ ಮಾಡುವ ಜನರು ಈ ತರಬೇತಿಯಲ್ಲಿ ಶ್ರದ್ಧೆಯಿಂದ ಪಾಲ್ಗೊಂಡು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದರು.
ಬಂದೂಕು ಬಗ್ಗೆ ಕೆಲ ವಿಷಯವನ್ನು ಯಾವಾಗಲು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಕೈಲಿ ಇದ್ದಾಗ ಪರೀಕ್ಷೆ ಮಾಡಿಕೊಂಡು ಇದರ ಬಗ್ಗೆ ಪರಿಜ್ಞಾನವನ್ನಿಟ್ಟುಕೊಂಡಿದ್ದರೇ ಉತ್ತಮ ಇಲ್ಲವಾದರೇ ಕೆಲ ಸಂದರ್ಭದಲ್ಲಿ ಇದರಿಂದ ಸಮಸ್ಯೆ ಆಗಬಹುದು ಎಂದು ಎಚ್ಚರಿಸಿದರು. ಬಂದೂಕು ತರಬೇತಿಗೆ ಬಂದ ಎಲ್ಲಾರಿಗೂ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಂದೂಕು ತರಬೇತಿಯಲ್ಲಿ ಉತ್ತಮವಾಗಿ ಪ್ರದರ್ಶಿಸಿದವರಿಗೆ ಬಹುಮಾನ ನೀಡಿ ಗೌರವಿಸಿದರು. ನಂತರದಲ್ಲಿ ಶಿಬಿರದಲ್ಲಿ ಕಲಿತ ಬಗ್ಗೆ ಹಾಗೂ ಅದರಿಂದ ಆದ ಅನುಭವವನ್ನು ಇದೆ ವೇಳೆ ತೋಡಿಕೊಂಡರು. ಬಂದೂಕು ಶಿಬಿರದ ಎಲ್ಲಾ ಶಿಭಿರಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪ್ರಶಂಸೆ ಪತ್ರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ, ಡಿವೈಎಸ್ಪಿ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು. ಸಮಾಜ ಸೇವಕ ಯದೀಶ ಅವರು ನಿರೂಪಿಸಿದರು. ರಮೇಶ್ ಸ್ವಾಗತಿಸಿದರು. ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ನಂಜಪ್ಪ ಪ್ರಾರ್ಥಿಸಿದರು.