ಹಾಸನ: ವಿದ್ಯುತ್ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿದ್ಯುತ್ ಅದಾಲತ್ ಸಹಕಾರಿ ಎಂದು ಮೈಸೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ತಿಳಿಸಿದರು.
ಅವರು ಹಾಸನ ತಾಲೂಕಿನ ಯಲಗುಂದದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯುತ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಹಕರ ಸಮಸ್ಯೆ ಅಲಿಸಲು ಪ್ರತಿ ತಿಂಗಳ ಮೂರನೇ ಶನಿವಾರ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್ ನಡೆಸಲಾಗುತ್ತಿದೆ. ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕಾಗಿದೆ. ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಹೊಂದಿರುವರಿಗೆ ಸರ್ಕಾರ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಇನ್ನೂ ಎಸ್ಸಿ/ಎಸ್ಟಿ ಸಮುದಾಯದವರ ಅಭಿವೃದ್ದಿಗೆ ತಿಂಗಳಿಗೆ ೭೫ ಯೂನಿಟ್ ವಿದ್ಯುತ್ ನೀಡಲು ಸರ್ಕಾರ ಮುಂದಾಗಿದೆ. ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದರು. ರೈತರು ಬೋರ್‌ವೆಲ್‌ಗೆ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ವಿದ್ಯುತ್ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾನೂನುಬಾಹಿರವಾಗಿ ವಿದ್ಯುತ್ ಪಡೆಯಲು ಮುಂದಾಗಬಾರದು. ಹೀಗೆ ಸರ್ಕಾರ ಇನ್ನೂ ಅನೇಕ ಯೋಜನೆಗಳನ್ನು ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಮಾಹಿತಿ ಪಡೆದುಕೊಂಡು ಯೋಜನೆ ಉಪಯೋಗ ಪಡೆದುಕೊಳ್ಳಬೇಕು ಎಂದರು.
ವಿದ್ಯುತ್ ಇಲಾಖೆ ಈಗಾಗಲೇ ನಷ್ಟದಲ್ಲಿದ್ದು ಗ್ರಾಹಕರು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿ ಮಾಡಬೇಕು. ನೀವು ಬಿಲ್ ಪಾವತಿ ಮಾಡಿಲ್ಲ ಎಂದರೆ ಖಾಸಗಿಕರಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಇದಕ್ಕೆ ಆಸ್ಪದ ಕೊಡಬಾರದು ಎಂದ ಅವರು, ಈಗಾಗಲೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಲಾಖೆಯ ಆರ್ಥಿಕ ಮಟ್ಟ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಅದಕ್ಕೆ ಗ್ರಾಹಕರು ಸಹಕರಿಸಬೇಕು ಎಂದರು.
ಸಭೆಯಲ್ಲಿ ಸುತ್ತಮುತ್ತಲ ಹಳ್ಳಿಯ ಸಾರ್ವಜನಿಕರು ಭಾಗವಹಿಸಿ ತಮ್ಮ ದೂರು ಅರ್ಜಿಗಳನ್ನು ನೀಡುವ ಮೂಲಕ ವಿದ್ಯುತ್ ಸಮಸ್ಯೆಗಳನ್ನು ಹೇಳಿಕೊಂಡರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳು ಪರಿಹಾರ ಕಂಡುಕೊಳ್ಳುವ ಸಲಹೆ ಸೂಚನೆಗಳನ್ನು ನೀಡಿದರು.
ಹಾಸನ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ಅರ್ಜುನ್, ಯಲಗುಂದ ಗ್ರಾ.ಪಂ ಅಧ್ಯಕ್ಣೆ ಶೀಲಾ ಜಯರಾಂ, ಉಪಾಧ್ಯಕ್ಷೆ ರೇಖಾ ವಿನಯ, ದುದ್ದ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗೇಗೌಡ, ಕೆಪಿಟಿಸಿಲ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನಯ್ಯ, ನಿಟ್ಟೂರು ಶಾಖೆ ಕಿರಿಯ ಇಂಜಿನಿಯರ್ ಮಧು ಬಿ.ಆರ್, ಸಾಲಗಾಮೆ ಶಾಖೆಯ ಕಿರಿಯ ಇಂಜಿನಿಯರ್ ಪ್ರಕಾಶ್ .ಹೆಚ್, ಇನ್ನಿತರರು ಇದ್ದರು.