ಹಾಸನ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ನಾಳೆ ಮಧ್ಯಾಹ್ನದ ವೇಳೆಗೆ ನೀಡುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ತಿಳಿಸಿದರು.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಮತ ಎಣಿಕೆ ಸಂಬಂಧ ಈಗಾಗಲೇ ಎಣಿಕೆ ಕೇಂದ್ರದ ಪರಿಶೀಲನೆ ನಡೆಸಿದ್ದು, ಬೆಳಿಗ್ಗೆ 7:00 ಗಂಟೆಗೆ ಮತಯಂತ್ರಗಳನ್ನು ಇಡಲಾಗಿರುವ ಸ್ಟ್ರಾಂಗ್ ರೂಮ್ ಅನ್ನು ತೆರೆಯಲಾಗುವುದು, ನಂತರ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಈಗಾಗಲೇ ಮತ ಎಣಿಕೆ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುಮಾರು 600 ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಅಂಚೆ ಮತದಾನ ಮಾಡಿರುವ ಮತಗಳನ್ನು ಎಣಿಸಲಾಗುವುದು. ಸುಮಾರು 3000 ಅಂಚೆ ಮತದಾನವಾಗಿದ್ದು, ಪ್ರತಿ ಸಾವಿರ ಮತಗಳ ಎಣಿಕೆಗೆ ಒಂದು ಗಂಟೆ ಕಾಲಾವಕಾಶ ತೆಗೆದುಕೊಳ್ಳಬಹುದು, ಆದ್ದರಿಂದ ಎಣಿಕೆ ಪ್ರಕ್ರಿಯೆ ವಿಳಂಬವಾಗಲಿದೆ.
ನಂತರ ಇವಿಎಂ ಮತಯಂತ್ರದ ಎಣಿಕೆ ಕಾರ್ಯ ನಡೆಯಲಿದ್ದು, ಎಣಿಕೆ ಕೇಂದ್ರದ ಒಳಗೆ ಪ್ರತಿ ಟೇಬಲ್ ಗೆ ಕೌಂಟಿಂಗ್ ಸೂಪರ್ ವೈಸರ್, ಏಜೆಂಟ್, ಮೈಕ್ರೋ ಅಬ್ಸರ್ವರ್ ಸೇರಿದಂತೆ ಮೂವರು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು. ಮತ ಎಣಿಕೆ ಪ್ರಕ್ರಿಯೆಯ ಪ್ರತಿ ಗಂಟೆಯ ಮಾಹಿತಿಯನ್ನು ಇಲಾಖೆಯ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರದ ಒಳಗೆ ಹಾಗೂ ಹೊರಗೆ ಅಗತ್ಯ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 800 ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎಣಿಕೆ ಕೇಂದ್ರ ಹಾಗೂ ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
ಯಾವುದೇ ಅಹಿತಕರ ಘಟನೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಾಳೆ ಬೆಳಗ್ಗೆ 6 ಗಂಟೆಯಿಂದ ಮೇ 14 ಬೆಳಿಗ್ಗೆ 6:00 ವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಭ್ಯರ್ಥಿಗಳ ಎದೆಯಲ್ಲಿ ಡವ-ಡವ
ನಾಳೆ ಮಧ್ಯಾಹ್ನದ ವೇಳೆಗೆ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲಿ ಡವ-ಡವ ಶುರುವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಲೆಕ್ಕಚಾರಕ್ಕೆ ವಿರುದ್ಧವಾಗಿ ಫಲಿತಾಂಶ ಹೊರ ಬೀಳುವ ಸಾಧ್ಯತೆಗಳು ಹೆಚ್ಚಿದ್ದು, ಮತದಾರರು ಯಾವ ಅಭ್ಯರ್ಥಿಗೆ ಆಶೀರ್ವಾದ ಮಾಡಿದ್ದಾರೆ ಎಂಬ ಗೊಂದಲ ಪಲಿತಾಂಶ ಹೊರ ಬೀಳುವವರೆಗೂ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಯೂ ನನ್ನ ಗೆಲುವು ನಿಶ್ಚಿತ ಎಂದು ಹೇಳಿದರೂ ಫಲಿತಾಂಶ ಯಾವ ರೀತಿ ಇರಲಿದೆ ಎಂಬುದು ಎಣಿಕೆ ಕೇಂದ್ರದ ಅಧಿಕೃತ ಮಾಹಿತಿಯಿಂದ ಮಾತ್ರ ಸಾಧ್ಯವಾಗಲಿದೆ.