ಬೇಲೂರು: ಬೇಲೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹಗರೆ ಕಾಂತರಾಜು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಮಲ್ಲೇಗೌಡರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಜೆಡಿಎಸ್‌ನ ಎಂ.ಕೆ.ಆರ್ ಸೋಮೇಶ್ ಹಾಗೂ ಹಗರೆ ಕಾಂತರಾಜು ನಾಮಪತ್ರ ಸಲ್ಲಿಸಿದ್ದರು. ನಂತರ ಇಬ್ಬರಲ್ಲಿ ಯಾರು ಅಧ್ಯಕ್ಷರಾಗಬೇಕೆಂದು ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸಿದ ಬಳಿಕ ಎಂ.ಕೆ.ಆರ್ ಸೋಮೇಶ್ ತಮ್ಮ ನಾಮಪತ್ರ ವಾಪಸ್ ಪಡೆದಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕಿ ಶಕ್ಕು, ಸಭೆಯ ನಂತರದಲ್ಲಿ ಕಾಂತರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಅಧ್ಯಕ್ಷ ಕಾಂತರಾಜುರನ್ನು ಅಭಿನಂದಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ ಅನಂತ ಸುಬ್ಬರಾಯ, ಬೇಲೂರು ಪಟ್ಟಣದಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಉತ್ತಮವಾಗಿ ನಡೆಯುತ್ತಿದೆ. ಅತ್ಯುತ್ತಮ ಕಟ್ಟಡ ಹೊಂದಿದೆ. ರೈತರಿಗೆ ಸಕಾಲಕ್ಕೆ ಅಗತ್ಯ ರಸಗೊಬ್ಬರ ಒದಗಿಸಲಾಗುತ್ತಿದೆ. ಅಲ್ಲದೆ ಅಧ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದರು. ಅದರಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ನಂತರ ಒಡಂಬಡಿಕೆಯಂತೆ ಸೋಮೇಶ್ ನಾಮಪತ್ರ ವಾಪಸ್ ಪಡೆದಿದ್ದರಿಂದ ಕಾಂತರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘದ ಬೆಳವಣಿಗೆಗೆ ಮುಂದಾಗಲಿ ಎಂದರು.
ನೂತನ ಅಧ್ಯಕ್ಷ ಕಾಂತರಾಜು ಮಾತನಾಡಿ, ನಮ್ಮ ಸಂಘದ ನಿರ್ದೇಶಕರು, ಷೇರುದಾರರ ಸಹಕಾರದಿಂದ ಸಂಘದ ಬೆಳವಣಿಗೆಗೆ ಕೆಲಸ ಮಾಡಲಾಗುವುದು. ರೈತರ ಅನುಕೂಲಕ್ಕಾಗಿ ಅಗತ್ಯವಿರುವ ಸೌಲಭ್ಯ ಒದಗಿಸಲು ಮುಂದಾಗಲಿದ್ದೇವೆ. ಜತೆಗೆ ಅಧ್ಯಕ್ಷನಾಗಲು ಸಹಕರಿಸಿದ ನಿರ್ದೇಶಕರು ಮತ್ತು ಜೆಡಿಎಸ್ ಪಕ್ಷದ ಎಲ್ಲ ಮುಖಂಡರುಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ರಾಜ ಶೇಖರಯ್ಯ, ನಿರ್ದೇಶಕರಾದ ಮಲ್ಲೇಗೌಡ, ಎಂ.ಕೆ.ಆರ್. ಸೋಮೇಶ್, ರವಿಕುಮಾರ್, ಎಸ್.ನಾಗೇಶ್, ಬಿ.ಎಲ್.ಲಕ್ಷ್ಮಣ್, ಕುಮಾರ್ ಕಣಗುಪ್ಪೆ, ವಿಜಯ್ ಕುಮಾರ್ ಸೇರಿದಂತೆ ಜೆಡಿಎಸ್ ಮುಖಂಡರಾದ ಎಂ.ಕೆ. ಆರ್.ನಾಗೇಶ್, ದಿಲೀಪ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಹೆಚ್.ಮಹೇಶ್, ತಾ.ಪಂ ಮಾಜಿ ಅಧ್ಯಕ್ಷ ರಂಗೇಗೌಡ ಸೇರಿದಂತೆ ಇತರರಿದ್ದರು.