ಹಾಸನ: ಒಂದು ಪಕ್ಷ ಹೇಳಿದಂತೆ ಕೆಲಸ ಮಾಡುವ ಮೂಲಕ ನಿಷ್ಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿಕೆ ನೀಡಿದ ಬೆನ್ನಲ್ಲೆ ಡಿವೈಎಸ್ಪಿ ಉದಯ ಭಾಸ್ಕರ್ ಅವರು ಬೇಸರದಲ್ಲಿ ಮನನೊಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಸ್ವಯಂ ವರ್ಗಾವಣೆ ಕೋರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಅನೇಕ ದಿನಗಳಿಂದ ಡಿವೈಎಸ್ಪಿ ಉದಯ್ ಭಾಸ್ಕರ್ ವಿರುದ್ದ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರಿಂದ ಮನನೊಂದು ಸ್ವತಃ ಉದಯ್ ಭಾಸ್ಕರ್ ಅವರೇ ತಾತ್ಕಾಲಿಕ ವರ್ಗ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನಾನು ನಿಷ್ಪಕ್ಷಪಾತ, ನೇರ ನುಡಿಯ ವ್ಯಕ್ತಿತ್ವವುಳ್ಳವನು. ಅವರ ಒತ್ತಾಯಗಳಿಗೆ ನಾನು ಮಣಿಯದ ಕಾರಣ ನನ್ನ ವಿರುದ್ದ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಎಂದು ಪರೋಕ್ಷವಾಗಿ ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಆರೋಪ ಮಾಡಿ ನನ್ನ ಮೇಲಾಧಿಕಾರಿಗಳಿಗೆ ಮಾನಸಿಕ ಒತ್ತಡಗಳನ್ನು ನೀಡುತ್ತಿದ್ದಾರೆ.
ರಾಜಕಾರಣಿಗಳು ಈ ಚುನಾವಣಾ ಸಂದರ್ಭದಲ್ಲಿ ನನಗೆ ಸುಗಮವಾಗಿ ಕೆಲಸ ಮಾಡಲು ಅಡ್ಡಿಪಡಿಸಿ ಗೊಂದಲ ಸೃಷ್ಟಿಪಡಿಸುವುದು ಸ್ಪಷ್ಟವಾಗಿದೆ. ಇದರಿಂದ ಮೇಲಾಧಿಕಾರಿಗಳಿಗೂ ಇರುಸುಮುರುಸು ಉಂಟಾಗುತ್ತದೆ. ಆದುದರಿಂದ ನಾನೇ ವರ್ಗಾವಣೆಗೆ ಬೇಡಿಕೆ ಇಟ್ಟಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಜಕಾರಣಿಗಳು ನನ್ನಿಂದ ಕಾನೂನು ಬಾಹಿರ ಕ್ರಮ ಆಪೇಕ್ಷಿಸುತ್ತಿದ್ದಾರೆ. ಹಾಗಾಗಿ ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ನನ್ನನ್ನು ಹಾಸನ ಜಿಲ್ಲೆಯಿಂದ ತಮಗೆ ಸರಿ ಎನಿಸಿದ ಸ್ಥಳಕ್ಕೆ ತಾತ್ಕಾಲಿಕ ವರ್ಗಾವಣೆಗೆ ಕೋರಿದ್ದೇನೆ ಎಂದು ಪತ್ರದಲ್ಲಿ ಉದಯ ಭಾಸ್ಕರ್ ಬರೆದು ಮನವಿ ಮಾಡಿದ್ದಾರೆ.