ಹಾಸನ: ಕಳೆದ ಒಂದು ವಾರಗಳಿಂದ ನಗರಸಭೆ ವಾಹನ ಚಾಲಕರು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನಲೆಯಲ್ಲಿ ಹಾಸನ ನಗರದ ಎಲ್ಲಾ ವಾರ್ಡ್‌ಗಳಲ್ಲೂ ಕಸ ತುಂಬಿ ಹೋಗಿದ್ದರಿಂದ ನಗರಸಭೆ ಅಧ್ಯಕ್ಷ ಆರ್. ಮೋಹನ್ ಅವರು ತಾವೇ ಖುದ್ದಾಗಿ ಕಸ ವಿಲೆವಾರಿ ವಾಹನಕ್ಕೆ ಚಾಲಕರಾಗಿ ಮನೆ ಮನೆಗೂ ಹೋಗಿ ಕಸ ಸಂಗ್ರಹಿಸುವ ಮೂಲಕ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೆಲಸ ಖಾಯಂ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ೭ ದಿನಗಳಿಂದಲೂ ನಗರಸಭೆಯ ವಾಹನ ಚಾಲಕರು ಹಾಗೂ ಇತರರು ಬೆಂಗಳೂರಿನಲ್ಲಿ ಧರಣಿ ಮಾಡುತ್ತಿದ್ದು, ಇದರಿಂದ ಕೆಲಸಕ್ಕೆ ಹಾಜರಾಗದೇ ಇರುವುದರಿಂದ ಕಸವು ವಿಲೇವಾರಿ ಆಗದೇ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಎಸೆದು ನಗರ ತುಂಬ ಕಸದ ರಾಶಿ ಕಂಡು ಬಂದಿದೆ. ಈ ಬಗ್ಗೆ ಸಾರ್ವಜನಿಕರು ಕೂಡ ನಗರಸಭೆ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಇದನ್ನರಿತ ಅಧ್ಯಕ್ಷ ಆರ್. ಮೋಹನ್, ತಮ್ಮ ಗುರುತು ಪತ್ತೆ ಆಗದಿರಲಿ ಎಂದು ಟೋಪಿ, ಮಾಸ್ಕ್ ಧರಿಸಿ ಸಾಮಾನ್ಯ ಚಾಲಕನಂತೆ ವಾಹನ ಚಲಾಯಿಸಿ ಮನೆ – ಮನೆಗೆ ತಿರುಗಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಇವರ ಜೊತೆ ಕೈ ಜೋಡಿಸಿರುವ ನಗರಸಭೆ ಸದಸ್ಯ ರಕ್ಷಿತ್ ಹಾಗೂ ಇತರ ಸಿಬ್ಬಂದಿಗಳು ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.