ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಕಾಗನೂರು ಹೊಸಳ್ಳಿಯಲ್ಲಿ 30 ವರ್ಷಗಳಿಂದ ಕುಡಿಯುವ ನೀರನ್ನು ಪೂರೈಸದೆ ಇರುವ ಬೇಜವಾಬ್ದಾರಿ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲ ಸೇರಿ ಧಿಕ್ಕಾರ ಕೂಗಿ, ಶಾಪ ಹಾಕುತ್ತಾ ಗ್ರಾಮದಿಂದ 500 ಮೀಟರ್ ದೂರವಿರುವ ನಮ್ಮ ಮೂರು ಮನೆಗಳಿಗೆ ಕುಡಿಯುವ ನೀರನ್ನು ಇದುವರೆಗೂ ಸಹ ಕಲ್ಪಿಸಿ ಇರುವುದಿಲ್ಲ. ಇಲ್ಲಿನ ಕುಟುಂಬಗಳು ಕುಡಿಯುವ ನೀರಿಗಾಗಿ ಪರದಾಡುವಂತಹ ಸಂದರ್ಭ ಒದಗಿ ಬಂದಿದೆ.
ಈ ಬಡ ಕುಟುಂಬಗಳು ಕುಡಿಯುವ ನೀರಿಗಾಗಿ ತಮ್ಮ ಗದ್ದೆಯಲ್ಲಿ ನೀರು ಗುಂಡಿಯನ್ನು ಮಾಡಿಕೊಂಡು ಕಲುಷಿತ ನೀರನ್ನು ಕುಡಿಯುವ ಪ್ರಸಂಗ ಒದಗಿ ಬಂದಿರುತ್ತದೆ. ಮಳೆಗಾಲದಲ್ಲಿ ಮಳೆ ಬಂದರೆ ಸಾಕು ಕೆಸರು ಗದ್ದೆಯಲ್ಲಿ ಮೊಳಕಾಲು ಉದ್ದ ಉತುಕೊಂಡು ಗದ್ದೆ ಒಳಗೆ ತಿರುಗಾಡಿ ಕಾಲು ಜಾರಿ ಕಾಲು ಮುರಿದಿರುವ ಘಟನೆ ಸಹ ಇದೆ.
ಕಾಗನೂರು ಹೊಸಳ್ಳಿ ಅಪ್ಪಾಜಿ ಅವರು ಸುದ್ದಿ ವಾಹಿನಿಯ ಜೊತೆ ಮಾತನಾಡುತ್ತಾ ನಮ್ಮ ಕುಟುಂಬಗಳು 30 ವರ್ಷಗಳಿಂದ ಗದ್ದೆಯ ಗುಂಡಿಯ ನೀರನ್ನು ಕುಡಿದು ಬದುಕುತ್ತಿದ್ದೇವೆ. ತಿರುಗಾಡಲು ರಸ್ತೆಯೂ ಸಹ ಇರುವುದಿಲ್ಲ. ಗ್ರಾಮ ಪಂಚಾಯಿತಿಗೆ ತುಂಬಾ ವರ್ಷಗಳಿಂದ ತಿಳಿಸಿ ಮನವಿ ನೀಡಿದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಬರಿ ಉಡಾಫೆ ಉತ್ತರವನ್ನು ಹೇಳಿ ಬಾಯಿ ಮುಚ್ಚಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಸಹ ಗ್ರಾಮದ ಈ ಮೂರು ಮನೆಗಳ ಬಗ್ಗೆ ಯಾರು ಸಹ ಗಮನಹರಿಸುತ್ತಿಲ್ಲ. ಆದರೆ ಉದ್ಯೋಗ ಖಾತ್ರಿ ಯೋಜನೆ ಕೆರೆ ಕೆಲಸ ಮಾಡದಿದ್ದರೂ ಸಹ ಕಾಮಗಾರಿಯನ್ನು ಮಾಡಿದ್ದೇವೆ ಅಂತ ಹೇಳಿ ಫೋಟೋ ತೆಗೆದು ಬಿಲ್ ಪಾವತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕುಡಿಯುವ ನೀರಿನ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಆಲೂರು ಕಡ್ಡಾಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಹೆಚ್ ಕೆ ಕುಮಾರಸ್ವಾಮಿ ಅವರು ಸತತವಾಗಿ ಮೂರು ಬಾರಿ ಶಾಸಕರಾದರು ಕೂಡ ಈ ಗ್ರಾಮಕ್ಕೆ ಸರಿಯಾಗಿ ಕುಡಿಯುವ ನೀರನ್ನು ಒದಗಿಸಲು ವಿಫಲರಾಗಿದ್ದಾರೆ. ಚುನಾವಣೆಯ ಸಮಯದಲ್ಲಿ ಮಾತ್ರ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ವಿಚಾರಿಸುತ್ತಾರೆ ನಂತರ ಗೆದ್ದ ಮೇಲೆ ಹಳ್ಳಿಯ ಕಡೆ ತಿರುಗಿ ಸಹ ಮುಖ ಮಾಡುವುದಿಲ್ಲ. ಇಂತಹ ಶಾಸಕರು ಈ ಮೀಸಲು ಕ್ಷೇತ್ರಕ್ಕೆ ಬೇಕಾ? ಕೇವಲ ನೀರನ್ನು ಒದಗಿಸಲು ಸಾಧ್ಯವಾಗದ ಇಂತಹ ಶಾಸಕರಿಗೆ ಬೇರೆ ಏನು ಸಹಾಯ ಮಾಡಲು ಸಾಧ್ಯ ಎಂಬುದು ಇವರ ಪ್ರಶ್ನೆಯಾಗಿದೆ.
ಈ ಬಾರಿ ಸ್ಥಳೀಯ ಶಾಸಕರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಶಾಸಕರು ಈ ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ನಮ್ಮ ಕುಟುಂಬದವರು ಸೇರಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮಹಿಳೆ ಸವಿತಾರವರು ಮಾತನಾಡಿ, ನಮ್ಮ ಗ್ರಾಮಕ್ಕೆ ೩೦ ವರ್ಷಗಳಿಂದ ಕುಡಿಯುವ ನೀರನ್ನು ಒದಗಿಸಲು ಗ್ರಾಮ ಪಂಚಾಯತಿಯವರು ವಿಫಲರಾಗಿದ್ದಾರೆ. ಕಂದಾಯ ಮಾತ್ರ ಕಟ್ಟಿಸಿಕೊಳ್ಳುತ್ತಾರೆ. ಆದರೆ ಮೂಲಭೂತ ಸೌಕರ್ಯಗಳನ್ನು ಮಾತ್ರ ಒದಗಿಸುತ್ತಿಲ್ಲ, ಎಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಸಹ ತಲೆಕೆಡಿಸಿಕೊಳ್ಳುತ್ತಿಲ್ಲ. ನಾವು ಗದ್ದೆ ಗುಂಡಿಯ ಹೆಸರು ನೀರನ್ನು ಕುಡಿಯುತ್ತಿದ್ದೇವೆ. ಈ ಕಾಲ ಬಂದರೂ ಕೂಡ, ರಾಜಕೀಯ ವ್ಯಕ್ತಿಗಳಿಗೆ ಗೊತ್ತಾದರೂ ಸಹ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಶಾಸಕರು ವೋಟನ್ನು ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಹಳ್ಳಿಯ ಜನರ ಬಗ್ಗೆ ಸ್ವಲ್ಪನೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಶಾಸಕರು ಬೇಕಾ ಎನ್ನುವ ಯಕ್ಷಪ್ರಶ್ನೆಯಾಗಿದೆ. ಇನ್ನಾದರೂ ಕೂಡ ಎಚ್ಚೆತ್ತುಕೊಂಡು ಕುಡಿಯುವ ನೀರು ಹಾಗೂ ರಸ್ತೆಯ ಸಮಸ್ಯೆಯನ್ನು ಬಗೆಹರಿಸಿ ಕೊಡಿ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಕಾಗನೂರು ಗ್ರಾಮಸ್ಥರು ಉಪಸ್ಥಿತರಿದ್ದರು.