ಹೊಳೆನರಸೀಪುರ: ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೂ ಮಾತೃ ಇಲಾಖೆಯಾಗಿ ಸಾರ್ವಜನಿಕರ ಕೆಲಸ ಮಾಡುತ್ತಿದೆ ಎಂದು ತಹಶೀಲ್ದಾರ ವಿಶ್ವನಾಥ ಹೇಳಿದರು. ತಾಲೂಕಿನ ಕಸಬಾ ಹೋಬಳಿ ತೆವಡಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತೆವಡನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ ಸ್ಥಳದಲ್ಲೇ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸಲು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದಾರೆ. ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಜಟಿಲವಾದ ಕೆಲಸ ಕಾರ್ಯಗಳು, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆ, ಸಾರಿಗೆ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯಗಳು, ಕುಂಠಿತಗೊಂಡಿದ್ದರೆ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ತಮಗೆ ಆಗಬೇಕಾದ ವಿಷಯ ಕುರಿತಂತೆ ಅರ್ಜಿ ನೀಡಿದರೆ ಪರಿಶೀಲಿಸಿ ತುರ್ತು ಕ್ರಮ ಜರುಗಿಸುವುದಾಗಿ ಹೇಳಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಘನ ಸರ್ಕಾರ ಪ್ರತಿ ತಿಂಗಳ ಮೂರನೇ ಶನಿವಾರ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದೆ. ಸರ್ಕಾರದ ಆದೇಶದಂತೆ ಹಿಂದುಳಿದ ಗ್ರಾಮದವರು ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದರೆ ಮತ್ತು ಸಾರ್ವಜನಿಕರ ಕಷ್ಟ ಕಾರ್ಪಣ್ಯಗಳನ್ನು ವಿಚಾರಿಸಿ ರೈತರು ನೀಡುವ ಅರ್ಜಿಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹರಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಮುಖ್ಯವಾಗಿ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಇತ್ತೀಚಿಗೆ ಪಿಂಚಣಿ ಯೋಜನೆ ಪಡೆಯಲು ಆಧಾರ್ ಕಾರ್ಡ್ ಅಥವಾ ಮತದಾರನ ಗುರುತಿನ ಚೀಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ೭೨ ಗಂಟೆಗಳಲ್ಲಿ ಪಿಂಚಣಿ ಜಾರಿಯಾಗುತ್ತದೆ. ಮಂಜೂರಾತಿ ಪತ್ರವನ್ನು ತಮ್ಮ ಕಚೇರಿಯಲೇ ಪಡೆದುಕೊಳ್ಳಬಹುದು ಎಂದರು.
ಪ್ರಸ್ತುತ ಚುನಾವಣಾ ವರ್ಷವಾದ್ದರಿಂದ ೧೮ ವರ್ಷ ಮೇಲ್ಪಟ್ಟ ಯುವಕ ಯುವತಿಯರು ಕೂಡಲೇ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮತದಾನ ಮಾಡುವಾಗ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಯಾವುದೇ ದಾಖಲಾತಿ ತೋರಿಸಿದರೆ, ಮತದಾನ ಮಾಡಬಹುದು. ಮತದಾನ ಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ವ್ಯಾಪ್ತಿಯ ಬಿ.ಎಲ್.ಒಗಳನ್ನು ಕೂಡಲೇ ಸಂಪರ್ಕಿಸಬೇಕೆಂದು ಸಲಹೆ ನೀಡಿದರು. ಪದವಿ ವ್ಯಾಸಂಗ ಮಾಡಿರುವ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಭಾವಿ ಸಿಡಿಪಿಓ ಭಾಗ್ಯಮ್ಮ, ತೋಟಗಾರಿಕೆ ಇಲಾಖೆಯ ಭವ್ಯ ಆಹಾರ ಇಲಾಖೆಯ ಶೋಭಾ, ಸಮಾಜ ಕಲ್ಯಾಣ ಅಧಿಕಾರಿ ಕೌಸರ್ ಅಹಮದ್, ತಾಲೂಕು ಆರೋಗ್ಯ ವೈದ್ಯ ಆಡಳಿತ ಅಧಿಕಾರಿ ಡಾಕ್ಟರ್ ರಾಜೇಶ್ ರಾಜಶ್ವ, ನಿರೀಕ್ಷಕ ಸತೀಶ್, ಎಡಿಎಲ್‌ಆರ್ ಮಂಜೇಶ್, ಪಶು ಇಲಾಖೆಯ ಕೃಪ, ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಗ್ರಾಮದ ಮುಖಂಡರು, ಮಂಜುನಾಥ, ಗ್ರಾಮಾಲಿಕ್ಕಿಗ ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.