ಹಾಸನ: ವಿಧಾನಸಭೆ ಚುನಾವಣೆ ಮೇ 10ರಂದು ಜರುಗಲಿದ್ದು, ಜಿಲ್ಲಾಡಳಿತದಿಂದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2023 ಏಪ್ರಿಲ್ 20ರವರೆಗೆ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 7,49,720 ಪುರುಷ ಮತದಾರರು ಹಾಗೂ 7,50,153 ಮಹಿಳಾ ಮತದಾರರಿದ್ದು, ಇತರರು 44 ಮಂದಿ ಸೇರಿದಂತೆ ಒಟ್ಟು 14,99,917 ಮಂದಿ ಮತದಾರರಿದ್ದಾರೆ. ಈ ಬಾರಿ 27,135 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದರು.
ಭಾರತ ಚುನಾವಣಾ ಆಯೋಗದಿಂದ ಈ ಬಾರಿ ಹೋಂ ವೋಟಿಂಗ್ ಪ್ರಕ್ರಿಯೆ ಪ್ರಾರಂಭ ಮಾಡಿದ್ದು, 1,062 ಅಂಗವಿಕಲ ಮತದಾರರ ಪೈಕಿ 1,031 ಮಂದಿ ಮತ ಚಲಾವಣೆ ಮಾಡಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟ 3,056 ಮತದಾರರ ಪೈಕಿ 2,874 ಮಂದಿ ಮತ ಚಲಾವಣೆ ಮಾಡಿರುವುದಾಗಿ ಮಾಹಿತಿ ನೀಡಿದರು. ದಿವ್ಯಾಂಗ ಮತದಾರರಿಗೆ ಮತದಾನ ಕೇಂದ್ರಗಳನ್ನು ಒದಗಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,000 ಮತಗಟ್ಟೆಗಳ ವ್ಯಾಪ್ತಿಯಲ್ಲಿ 19,327 ದಿವ್ಯಾಂಗ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 1,062 ದಿವ್ಯಾಂಗ ಮತದಾರರು ಹೋಂ ವೋಟಿಂಗ್ ಆಯ್ಕೆ ಮಾಡಿಕೊಂಡಿದ್ದು, 1,028 ಮತದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದ್ದಾರೆ ಎಂದರು. ದಿವ್ಯಾಂಗ ಮತದಾರ ಕೇಂದ್ರಗಳಲ್ಲಿ ಎಲ್ಲಾ ಅಗತ್ಯ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಇವಿಎಂ ಯಂತ್ರಗಳಲ್ಲಿ ಬ್ರೈಲ್ ಲಿಪಿ ಅಳವಡಿಕೆ ಮಾಡಲಾಗಿದೆ. 10-12 ಮತಗಟ್ಟೆಗಳಿಗೆ ಒಬ್ಬರಂತೆ ಜಿಲ್ಲೆಯಲ್ಲಿ ಒಟ್ಟು 223 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇವರಿಗೆ ಮ್ಯಾಜಿಸ್ಟಿಯಲ್ ಅಧಿಕಾರವನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ಎಲ್ಲಾ ಮತಗಟ್ಟೆಗಳ ಪೈಕಿ ಈ ಹಿಂದಿನ ಚುನಾವಣೆಗಳಲ್ಲಿ ನಡೆದ ಘಟನೆಗಳನ್ನು ಆಧರಿಸಿ, ದುರ್ಬಲ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಹಾಗೂ ಪಾರದರ್ಶಕತೆ ನೀಡುವ ನಿಟ್ಟಿನಲ್ಲಿ ಸೆಂಟ್ರಲ್ ಪ್ಯಾರಾಮೀಲಿಟರಿ ಫೋರ್ಸ್ 1,007 ಬೂತ್‌ಗಳಿಗೆ ವಿಡಿಯೋ ಚಿತ್ರೀಕರಣ (ವೆಬ್ ಕಾಸ್ಟಿಂಗ್) ಮಾಡಲಾಗುತ್ತಿದೆ. 460 ಕಡೆ ಮೈಕ್ರೋ ಅಬಸರ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಚುನಾವಣೆ ಹಿನ್ನೆಲೆಯಲ್ಲಿ 299 ಬಸ್, 303 ಜೀಪ್ ಗಳು, 90 ಮ್ಯಾಕ್ಸ್ ಸಿ ಕ್ಯಾಬ್ ಗಳನ್ನು ಬಳಸಿ ಮತಗಟ್ಟೆ ಸಿಬ್ಬಂದಿಗಳನ್ನು ಆಯಾ ಮತಗಟ್ಟೆಗಳಿಗೆ ತಲುಪಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳಿಗೆ 209 ಕಾರು, ಜೀಪುಗಳನ್ನು ಹಾಗೂ 43 ಮ್ಯಾಕ್ಸ್ ಕ್ಯಾಬ್ ಗಳನ್ನು ಒದಗಿಸಲಾಗುತ್ತಿದೆ ಎಂದರು.
ಮತದಾರರ ಗುರುತಿನ ಚೀಟಿ ಹೊರತುಪಡಿಸಿ ಇತರೆ ದಾಖಲೆ:
ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಭಾರತ ಚುನಾವಣಾ ಆಯೋಗವು ನೀಡಿರುವ ಭಾವಚಿತ್ರವುಳ್ಳ ಮತದಾರರ ಚೀಟಿ ಮತದಾನ ಅಧಿಕಾರಿಗಳಿಗೆ ತೋರಿಸುವುದು ಕಡ್ಡಾಯವಾಗಿದೆ. ಒಂದು ಪಕ್ಷ ಯಾವುದೇ ಕಾರಣದಿಂದ ಗುರುತಿನ ಚೀಟಿ ಲಭ್ಯವಿಲ್ಲದಿದ್ದಲ್ಲಿ ಪರ್ಯಾಯವಾಗಿ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ (ಪ್ಯಾನ್ ಕಾರ್ಡ್ ), ಆಧಾರ್ ಕಾರ್ಡ್, ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರದ ಪಾಸ್ ಪುಸ್ತಕವನ್ನು ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಬಹುದಾಗಿದೆ ಎಂದರು.
ನಿಷೇಧಾಜ್ಞೆ ಜಾರಿ:
ಮೇ 10ರಂದು ಬೆಳಗ್ಗೆ 6 ಗಂಟೆಯಿಂದ ಮೇ 11ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಲ್ಲಿ ಚುನಾವಣೆಯ ಶಾಂತಿಯುತವಾಗಿ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು 144ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಾದರಿ ನೀತಿ ಸಮಿತಿ ಅನುಷ್ಠಾನಗೊಂಡ ನಂತರ 1,87,29,430 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ. 1,04,65,643 ಮೌಲ್ಯದ ಸುಮಾರು 23,964 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಹಾಗೂ 1.55 ಕಿಲೋ ಗ್ರಾಂ 1 ಲಕ್ಷ ಮೌಲ್ಯದ ಡ್ರಗ್ಸ್ ಮತ್ತು 1,28,46,420 ಮೌಲ್ಯದ ಉಡುಗೊರೆಗಳನ್ನು ವಶಕ್ಕೆ ಪಡೆದಿದ್ದು, ಇದರಲ್ಲಿ 1.19 ಕೋಟಿ ಮೌಲ್ಯದ ಸೀರೆಯನ್ನು ಇತ್ತೀಚಿಗೆ ವಿ ಆರ್ ಎಲ್ ಸಾಗಟ ಕಂಪನಿ ದಾಸ್ತಾನು ಮಳಿಗೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಅಗತ್ಯ ದಾಖಲೆ ಒದಗಿಸಿದವರಿಗೆ ವಶಕ್ಕೆ ಪಡೆದ ನಗದನ್ನು ವಾಪಸ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
24 ಮಂದಿ ಗಡಿಪಾರು:
ಇದುವರೆಗೆ 1,433 ಪ್ರಕರಣಗಳನ್ನು ದಾಖಲಿಸಿದ್ದು, ಪೊಲೀಸ್ ಇಲಾಖೆಯಲ್ಲಿ 123 ಹಾಗೂ ಅಬಕಾರಿ ಇಲಾಖೆಯಲ್ಲಿ 1,310 ಪ್ರಕರಣಗಳು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 24 ಮಂದಿಯನ್ನು ಗಡಿಪಾರು ಮಾಡಿದ್ದು, ಒಬ್ಬರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಸರ್ಕಾರದಿಂದ 23 ಕ್ಯಾಂಪ್ ಗಳಲ್ಲಿ ವಿವಿಧ ವಿಭಾಗದ ಭದ್ರತಾ ಸಿಬ್ಬಂದಿಗಳನ್ನು ಒದಗಿಸಲಾಗಿದ್ದು, ಪ್ರತಿ ಕ್ಯಾಂಪ್ ನಲ್ಲಿ 100 ಮಂದಿಯಂತೆ 2,300 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ತಮಿಳುನಾಡಿನಿಂದ 150 ಹೋಂ ಗಾರ್ಡ್ ಸೇರಿದಂತೆ ಸ್ಥಳೀಯ 800 ಮಂದಿ ಹೋಂ ಗಾರ್ಡ್ ಗಳನ್ನು ಚುನಾವಣೆ ಕಾರ್ಯದಲ್ಲಿ ನಿಯೋಜಿಸಲಾಗಿದೆ.
ಇದಲ್ಲದೇ 1,700 ಸಿಬ್ಬಂದಿಗಳನ್ನು ಹೊರಗಡೆಯಿಂದ ಕರೆಸಿಕೊಳ್ಳಲಾಗುತ್ತಿದ್ದು, ಮೈಸೂರು-ಕೊಡಗು ಜಿಲ್ಲೆಯಿಂದಲೂ ಸಿಬ್ಬಂದಿಗಳು ನಿಯೋಜನೆ ಗೊಳ್ಳುತ್ತಿದ್ದು, ರಾಜ್ಯದ ಪ್ರತಿ ಜಿಲ್ಲೆಗೆ ಕೆಎಸ್‌ಆರ್‌ಪಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದರು.
ಮತದಾನ ಅರಿವು:
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಅವರು ಮಾತನಾಡಿ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರಪತ್ರ ವಿತರಣೆ, ಬೀದಿ ನಾಟಕ, ರಂಗೋಲಿ ಸ್ಪರ್ಧೆ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಇತರ ಚಟುವಟಿಕೆಗಳನ್ನು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಳೆದ ಬಾರಿ 72 ಪ್ರತಿಶತಕ್ಕಿಂತ ಕಡಿಮೆ ಮತದಾನ ಆದಂತಹ 181 ಕೇಂದ್ರಗಳ ಸಮೀಪ ಹೆಚ್ಚಿನ ಪ್ರಚಾರವನ್ನು ಕೈಗೊಳ್ಳಲಾಗಿದೆ ಎಂದರು.
ಮಲೆನಾಡು ಭಾಗವಾದ ಆಲೂರು-ಸಕಲೇಶಪುರ ತಾಲೂಕಿನಲ್ಲಿ ಆನೆ ಹಾವಳಿ ಇರುವ ಪ್ರದೇಶವನ್ನು ಗುರುತಿಸಿ ಆನೆಯು ಉಪಟಳ ಕಂಡು ಬಂದ ಒಂದು ಗಂಟೆಯಲ್ಲಿ ಅಗತ್ಯ ಕ್ರಮ ಕೈಗೊಂಡು ಸುಗಮ ಮತದಾನಕ್ಕೆ ಸಹಕರಿಸುವಂತೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.